EVM ಬದಲು ಬ್ಯಾಲಟ್ ಪೇಪರ್ ಬಳಕೆಗೆ ನಿರ್ಧಾರ: ಸರ್ಕಾರದ ವಿರುದ್ಧ BJP ವಾಗ್ದಾಳಿ; ನಮ್ಮ ಅನುಭವದ ಮೇಲೆ ತೀರ್ಮಾನಿಸಿದ್ದೇವೆ- ಸಿಎಂ ಸಿದ್ದರಾಮಯ್ಯ
- Ananthamurthy m Hegde
- 22 hours ago
- 1 min read
ಬೆಂಗಳೂರು: ಬ್ಯಾಲಟ್ ಪೇಪರ್ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇವಿಎಂ ಬದಲಿಗೆ ಬ್ಯಾಲಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ನಮ್ಮ ಅನುಭವದ ಮೇಲೆ ನಾವು ಈ ತೀರ್ಮಾನ ಮಾಡಿದ್ದೇವೆಂದು ಹೇಳಿದರು.
ಅನೇಕ ದೇಶಗಳು ಇವಿಎಂ ಬಳಸಿ ಪುನಃ ಬ್ಯಾಲಟ್ ಪೇಪರ್ ಮೂಲಕ ಚುನಾವಣೆ ಮಾಡುತ್ತಿವೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗಾಗಿ ಬ್ಯಾಲಟ್ ಪೇಪರ್ ಬಳಕೆಗೆ ನಾವು ನಿರ್ಧರಿಸಿದ್ದೇವೆಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾತ್ರ ಮತಪತ್ರ ಬಳಸಲು ತೀರ್ಮಾನಿಸಿದ್ದು, ಅದಕ್ಕೆ ಬಿಜೆಪಿ ಯಾಕೆ ಗಾಬರಿಯಾಗಬೇಕು? ಬಿಜೆಪಿ ನಾಯಕರು ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಅದಕ್ಕಾಗಿ ಈ ಚುನಾವಣೆಯನ್ನು ಮತಪತ್ರದ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಬಿಜೆಪಿ ಆತಂಕ ಪಡುತ್ತಿರುವುದೇಕೆ? ಬಿಜೆಪಿ ಸರ್ಕಾರದ ಅವಧಿಯಲ್ಲೇ ಇದಕ್ಕೆ ಅವಕಾಶ ನೀಡಿ ಕಾನೂನು ಮಾಡಲಾಗಿದೆ. ಅದನ್ನು ಬಳಸಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿಗರು ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದರು.
ನಾವು ಲೋಕಸಭೆ ಚುನಾವಣೆಗಳನ್ನು ಪರಿಶೀಲಿಸಿದ್ದೇವೆ. ಹೀಗಾಗಿ ಸಹಕಾರಿ ಸಂಘಗಳ ಚುನಾವಣೆ ನಡೆಸುವಂತೆಯೇ ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತಿದ್ದೇವೆ. ಆದರೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವೇ ತೀರ್ಮಾನಿಸಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
Comments