top of page

ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು?

  • Writer: Ananthamurthy m Hegde
    Ananthamurthy m Hegde
  • Mar 19
  • 2 min read

ವಾಷಿಂಗ್ಟನ್‌: ಅಂತರಿಕ್ಷದಲ್ಲಿ 9 ತಿಂಗಳು ಕಳೆದ ಸುನೀತಾ ವಿಲಿಯಮ್ಸ್ (Sunita Williams) ಬುಚ್ ವಿಲ್ಮೋರ್ ಯಶಸ್ವಿಯಾಗಿ ಧರೆಗೆ ಇಳಿದಿದ್ದಾರೆ. ನಾಸಾ (NASA) ಗಗನಯಾನಿ ನಿಕ್ ಹೇಗ್, ರಷ್ಯಾದ ಅಲೆಕ್ಸಾಂಡರ್ ಗೊರ್ಚನೋವ್ ಜೊತೆಗೂಡಿ ಸುನಿತಾ ಮತ್ತು ವಿಲ್ಮೋರ್ ಯಶಸ್ವಿಯಾಗಿ ಭೂಮಿಗೆ ಬಂದಿದ್ದಾರೆ.

ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಕ್ರೂ ಡ್ರ್ಯಾಗನ್‌ ಗಗನನೌಕೆ (Crew Dragon Capsule) ತನ್ನ 17 ಗಂಟೆಗಳ ಪಯಣವನ್ನು ಆರಂಭಿಸಿ ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5:57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ) ಸರಿಯಾಗಿ ಫ್ಲೋರಿಡಾ ಕಡಲ ತೀರದಲ್ಲಿ ಲ್ಯಾಂಡ್ ಆಗಿದೆ.

ನೌಕೆಯಿಂದ ಹೊರ ಬಂದ ಯಾನಿಗಳನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗಿದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಗಗನ ಯಾತ್ರಿಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಭೂಮಿಗೆ ಬಂದಿರುವ ಗಗನಯಾತ್ರಿಗಳಿಗೆ ನಾಸಾ 45 ದಿನಗಳ ರಿಹ್ಯಾಬಿಲಿಟೇಶನ್‌ ಯೋಜನೆ ರೂಪಿಸಿದೆ. 45 ದಿನಗಳಲ್ಲಿ ದೇಹದ ಚಟುವಟಿಕೆ ಮತ್ತು ಆರೋಗ್ಯ ಪರೀಕ್ಷೆಗಳನ್ನು ಗಗನಯಾತ್ರಿಗಳಿಗೆ ಮಾಡಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಅವಕಾಶ ನೀಡಲಾಗುತ್ತದೆ. ನೆಲದ ಮೇಲೆ ನಡೆಯಲು ಸಹಾಯ, ಆಹಾರ, ಅಗತ್ಯ ಔಷಧಗಳನ್ನು ಒದಗಿಸುವುದು, ಕಾಲುಗಳನ್ನು ಬಲಪಡಿಸುವ ವ್ಯಾಯಾಮ, ಕಾಲುಗಳು ತಮ್ಮ ನಿಯಂತ್ರಣಕ್ಕೆ ಬರುವವರೆಗೂ ಮೇಲ್ವಿಚಾರಣೆ ನಡೆಯಲಿದೆ.

ಏನೇನು ಸಮಸ್ಯೆ ಎದುರಿಸುತ್ತಾರೆ?

ಗುರುತ್ವಾಕರ್ಷಣೆ ಪ್ರಭಾವ ಇಲ್ಲದ ಕಾರಣ ದೇಹದಲ್ಲಿ ಕೆಲ ಬದಲಾವಣೆ ಆಗುತ್ತದೆ. ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ ಸ್ನಾಯು, ಮೂಳೆಗಳ ಸಾಂದ್ರತೆ ಶೇ.30 ಕ್ಷೀಣಿಸುತ್ತದೆ. ಮೂಳೆಗಳು ಬಲ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಈ ಕಾರಣಗಳಿಂದ ಗಗನಯಾನಿಗಳಿಗೆ ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ.

ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಉಂಟಾಗಬಹುದು. ವಿಕಿರಣವು ಕ್ಯಾನ್ಸರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.

ಭೂಮಿಗೆ ವಾಪಸ್ ಆದ ತಕ್ಷಣ ಗಗನಯಾನಿಗಳಿಗೆ ನಡೆದಾಡಲು ಆಗುವುದಿಲ್ಲ. ಕೆಲವು ಕಾಲ ನಿಂತುಕೊಳ್ಳಲೂ ಸಮಸ್ಯೆ ಆಗಲಿದೆ. ಅಧಿಕ ರೇಡಿಯೇಷನ್ ಕಾರಣ ಕ್ಯಾನ್ಸರ್ ಭೀತಿ, ಡಿಎನ್‌ಎಗೆ ಹಾನಿಯಯಾಗುವ ಸಾಧ್ಯತೆಯಿದೆ. ಒಂಟಿತನ, ಮಾನಸಿಕ ಒತ್ತಡ, ನಿದ್ರಾಹೀನತೆ, ದೃಷ್ಟಿ ಕೇಂದ್ರೀಕರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ.

ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇರವು ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದರು ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ ಮತ್ತು ವಿಲ್ಮೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.


Comentarios


Top Stories

bottom of page