top of page

ಅದಾನಿ ವಿವಾದ, ಜಾರ್ಜ್ ಸೊರೋಸ್ ಜೊತೆಗೆ ಕಾಂಗ್ರೆಸ್ ಸಂಪರ್ಕ ಪ್ರಸ್ತಾಪ : ಸದನ ಮುಂದೂಡಿಕೆ

  • Writer: Ananthamurthy m Hegde
    Ananthamurthy m Hegde
  • Dec 10, 2024
  • 1 min read

ree

ನವದೆಹಲಿ: ಅದಾನಿ ವಿವಾದ ಹಾಗೂ ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್ ಜೊತೆಗೆ ಕಾಂಗ್ರೆಸ್ ಸಂಪರ್ಕದ ಆರೋಪ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿಂದು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಯಿತು. ಪರಿಣಾಮ ಗದ್ದಲ,ಕೋಲಾಹಲ ಉಂಟಾಗಿ ಉಭಯ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಓಂ ಬಿರ್ಲಾ, ಇತ್ತೀಚಿನ ದಿನಗಳಲ್ಲಿ ಸಂಸತ್ತಿನ ಕಲಾಪ ನುಂಗಿಹಾಕುತ್ತಿರುವ ಅಡೆತಡೆಗಳನ್ನು ಪ್ರಸ್ತಾಪಿಸಿದರು. ಸದನದ ಪಾವಿತ್ರ್ಯತೆ ಕುರಿತು ಮಾತನಾಡಿದ ಅವರು, ನಮ್ಮ ಪ್ರಜಾಪ್ರಭುತ್ವ ಜನರ ಆಶಯ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಈ ಸದನದ ಘನತೆಯನ್ನು ಕಾಪಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.

ಆದರೆ, ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದರು, ಸ್ಪೀಕರ್ ಅವರು ಮೊದಲು ಮಧ್ಯಾಹ್ನದವರೆಗೂ ತದನಂತರ ದಿನದ ಮಟ್ಟಿಗೆ ಮುಂದೂಡಿದರು.

ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಹಾಗೂ ಪ್ರತಿಪಕ್ಷದ ಸದಸ್ಯರು ಘೋಷಣೆ ಕೂಗುವ ಮೂಲಕ ತಮ್ಮ ಬೇಡಿಕೆಗಳನ್ನು ಆಲಿಸುವಂತೆ ಒತ್ತಾಯಿಸಿದರು. ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಿದ ಸಭಾಪತಿ ಜಗದೀಪ್ ಧಂಖರ್ ಅವರು ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯನ್ ಮಾತನಾಡಲು ಅವಕಾಶ ನೀಡಿದರು. ಆದಾಗ್ಯೂ, ಗದ್ದಲ, ವಾಕ್ಸಮರ ಮುಂದುವರೆದಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಿದರು.

ಬಿಜೆಪಿ ಸಂಸದರು ಸೋಮವಾರದಿಂದ ಜಾರ್ಜ್ ಸೊರೋಸ್ ಮತ್ತು ಕಾಂಗ್ರೆಸ್ ನಡುವಿನ ನಂಟಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಆರೋಪಿಸುತ್ತಿದ್ದರೆ, ಪ್ರತಿಪಕ್ಷಗಳು ಅದಾನಿ ವಿವಾದ ಮತ್ತು ಸಂಭಾಲ್ ಹಿಂಸಾಚಾರದಂತಹ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿವೆ. ಚಳಿಗಾಲದ ಅಧಿವೇಶನ ನವೆಂಬರ್ 25 ರಿಂದ ಶುರುವಾದಾಗಿನಿಂದಲೂ ಆಗಾಗ್ಗೆ ಅಡ್ಡಿಯಾಗುತ್ತಲೇ ಇದ್ದು, ಕಲಾಪ ವ್ಯರ್ಥವಾಗುತ್ತಿದೆ. ಕಳೆದ ವಾರ ಎರಡು ದಿನ ಮಾತ್ರ ಸದನ ಸುಗಮವಾಗಿ ನಡೆದಿತ್ತು

Comments


Top Stories

bottom of page