top of page

ಅನಾಥ ಕಾರಲ್ಲಿ ೫೨ ಕೆ.ಜಿ ಚಿನ್ನ ೧೦ ಕೋಟಿ ನಗದು ವಶ

  • Writer: Ananthamurthy m Hegde
    Ananthamurthy m Hegde
  • Dec 21, 2024
  • 1 min read
ree

ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದ ಕಾರೊಂದರಲ್ಲಿ 52 ಕೆ.ಜಿ. ಚಿನ್ನ ಹಾಗೂ 10 ಕೋಟಿ ರೂ. ಹಣವಿದ್ದ ಬ್ಯಾಗ್‌ ಅನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ರಾಜ್ಯದ ಹಲವೆಡೆ ನಿರ್ಮಾಣ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆದಾಯ ಮರೆಮಾಚಲು ಕಾರೊಂದರಲ್ಲಿ ಹಣ, ಚಿನ್ನವನ್ನು ತುಂಬಿ ಕಾಡಿನಲ್ಲಿ ಬಚ್ಚಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯದಲ್ಲಿ ಹಲವು ದಿನಗಳಿಂದ ಅನಾಮಿಕ ಎಸ್‌ಯುವಿ ಕಾರೊಂದು ನಿಂತಿರುವುದನ್ನು ಗಮನಿಸಿದ್ದ ಮೆಂಡೋರಿ ಗ್ರಾಮಸ್ಥರು, ಸ್ಥಳೀಯ ಪೊಲೀಸರು ಹಾಗೂ ಐಟಿ ಇಲಾಖೆಗೆ ಮಾಹಿತಿ ನೀಡಿದ್ದರು.

ಶುಕ್ರವಾರ 100 ಪೊಲೀಸ್‌ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿದ ಐಟಿ ಅಧಿಕಾರಿಗಳು, ಪರಿಶೀಲಿಸಿದಾಗ ಬೃಹತ್‌ ಪ್ರಮಾಣದ ನಗ-ನಾಣ್ಯ ಪತ್ತೆಯಾಗಿದೆ. ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನ ಒಳಗೆ 7- 8 ಬ್ಯಾಗ್‌ಗಳು ಇದ್ದವು. ಇವುಗಳಲ್ಲಿ ಕೆಲವು ಚೀಲಗಳನ್ನು ಹೊರಗಿನಿಂದ ಕಿಟಕಿ ಗಾಜಿನಿಂದಲೇ ಕಾಣಬಹುದಾಗಿತ್ತು ಎಂದು ರತಿಬಾದ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ಯಾಗ್‌ಗಳ ಒಳಗೆ ಒಟ್ಟು 52 ಕೆಜಿ ಚಿನ್ನ ಮತ್ತು 9.86 ಕೋಟಿ ರೂ ನಗದು ಹಣ ದೊರಕಿದೆ.

ಕಳೆದ ವಾರ ಐಟಿ ಇಲಾಖೆ ವಿವಿಧ ನಿರ್ಮಾಣ ಕಂಪನಿಗಳ ಮೇಲೆ 51 ಸ್ಥಳಗಳಲ್ಲಿ ನಡೆಸಲಾಗಿತ್ತು. ಆರ್‌ಟಿಒದ ಮಾಜಿ ಕಾನ್‌ಸ್ಟೇಬಲ್ ಸೌರಭ್ ಶರ್ಮಾ ಎಂಬುವವರ ನೆ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿಯಲ್ಲಿ 2.85 ಕೋಟಿ ರೂ. ನಗದು, 60 ಕೆ.ಜಿ. ಬೆಳ್ಳಿ ಗಟ್ಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎಂದು ಲೋಕಾಯುಕ್ತ ಡಿಎಸ್‌ಪಿ ರವೀಂದ್ರ ಸಿಂಗ್ ತಿಳಿಸಿದ್ದರು.

ಇದಲ್ಲದೆ, ಹಾಲಿ ನಡೆಯುತ್ತಿರುವ ಐಟಿ ದಾಳಿಗಳಲ್ಲಿ ಸುಮಾರು 50 ಲಕ್ಷ ರೂ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೌರಭ್ ಶರ್ಮಾ ಮನೆಯಲ್ಲಿ ನಾಲ್ಕು ವಾಹನಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಒಂದು ಐಷಾರಾಮಿ ವಾಹನವಾಗಿತ್ತು.

ಶರ್ಮಾ ಮನೆ ಹಾಗೂ ದಾಖಲೆಗಳಿಂದ ಕೋಟ್ಯಂತರ ರೂ ಮೌಲ್ಯದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ವಿವರಿಸಿದ್ದಾರೆ. ಸೌರಭ್ ಶರ್ಮಾ ಯಾವುದೋ ಹವಾಲಾ ಜಾಲದ ಭಾಗವಾಗಿರಬೇಕು ಎಂದು ಭ್ರಷ್ಟಾಚಾರ ನಿಗ್ರಹ ಘಟಕ ಶಂಕಿಸಿದೆ. ಶರ್ಮಾಗೆ ರಾಜ್ಯದ ಅನೇಕ ಪ್ರತಿಷ್ಠಿತ ಕುಳಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಜತೆ ಸಂಪರ್ಕವಿದೆ ಎಂದು ಹೇಳಲಾಗಿದೆ.

Comments


Top Stories

bottom of page