ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ 111 ಪಂಜಾಬ್ ರೈತರು!
- Ananthamurthy m Hegde
- Jan 16
- 1 min read
ಚಂಡೀಗಢ: ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಂಜಾಬ್ ರೈತರು ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರೈತ ಮುಖಂಡ ದಲ್ಲೆವಾಲ್ ಅವರ ಅಮರಣಾಂತ ಉಪವಾಸ ಸತ್ಯಾಗ್ರಹ 51ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಅವರ ಜೊತೆಗೆ ಸುಮಾರು 111 ರೈತರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

'ಕಪ್ಪು ಬಟ್ಟೆ ಧರಿಸಿ, ದಲ್ಲೇವಾಲ್ ಮೊದಲು ನಾವು ಹುತಾತ್ಮರಾಗುತ್ತೇವೆ ಎಂದು ಪಂಜಾಬಿ ಭಾಷೆಯಲ್ಲಿ ಬರೆದಿರುವ ಫಲಕಗಳನ್ನು ಕುತ್ತಿಗೆಯಲ್ಲಿ ಹಾಕಿಕೊಂಡು ಖಾನೌರಿ ಗಡಿಯಲ್ಲಿ ಬುಧವಾರ ತಮ್ಮ ಆಮರಣಾಂತ ಉಪವಾಸವನ್ನು ಪ್ರಾರಂಭಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಪಂಜಾಬ್ ರೈತರು, ಹರಿಯಾಣಕ್ಕೆ ತೆರಳುತ್ತಿದ್ದಂತೆ ಪ್ರಾರ್ಥನೆ ಸಲ್ಲಿಸಿದ ನಂತರ ಆಮರಣಾಂತ ಉಪವಾಸ ಆರಂಭಿಸಿದರು. ನಂತರ ಮುಳ್ಳುತಂತಿ ತುಂಡರಿಸಿ ರಸ್ತೆಯಲ್ಲೇ ಕುಳಿತರು. ಹರಿಯಾಣದ ಗಡಿ ಭಾಗದಲ್ಲಿ ಹರಿಯಾಣ ಪೊಲೀಸರು ಭಾರೀ ಭದ್ರತೆಯನ್ನು ಒದಗಿಸಿದ್ದಾರೆ.
ತಾವು ದೃಢಸಂಕಲ್ಪ ಮತ್ತು ಭಾವನಾತ್ಮಕವಾಗಿ ಬದ್ಧರಾಗಿದ್ದೇವೆ. ತಮ್ಮ ಬೇಡಿಕೆ ಬೆಂಬಲಿಸಿ ದಲ್ಲೇವಾಲ್ ಗೂ ಮುನ್ನಾ ತಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಪ್ರತಿಭಟನಾ ನಿರತ ರೈತರು ಹೇಳಿದರು. ಚಳಿಯಿಂದ ರಕ್ಷಿಸಲು ಪ್ರತಿಭಟನಾಕಾರರನ್ನುಈಗ ಟೆಂಟ್ ನಲ್ಲಿ ಇರಿಸಲಾಗಿದ್ದು, ನೀರನ್ನು ಮಾತ್ರ ನೀಡಲಾಗುತ್ತಿದೆ.
ದಲ್ಲೇವಾಲ್ ಅವರ ದೇಹಕ್ಕೆ ನೀರು ಕೂಡಾ ಸೇರುತ್ತಿಲ್ಲವಾದ್ದರಿಂದ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ಬಹು ಅಂಗಾಂಗ ವೈಫಲ್ಯದತ್ತ ಸಾಗುತ್ತಿದ್ದಾರೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ. ಸುದೀರ್ಘ ಉಪವಾಸದ ಹೊರತಾಗಿಯೂ ವೈದ್ಯರ ನೆರವನ್ನು ಅವರ ತಿರಸ್ಕರಿಸಿರುವುದರಿಂದ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ದಲ್ಲೆವಾಲ್ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ದೃಢಪಡಿಸಿದ್ದಾರೆ.
ಕೇಂದ್ರವನ್ನು ಟೀಕಿಸಿದ ರೈತ ಮುಖಂಡ ಅಭಿಮನ್ಯು ಕೋಹರ್, ರೈತರ ಬೇಡಿಕೆಗಳಿಗೆ ಕೇಂದ್ರ ಸರಕಾರ ಕಿಮ್ಮತ್ತು ನೀಡುತ್ತಿಲ್ಲ, ಇಂದು ದಲ್ಲೆವಾಲ್ ಅವರ ಅಮರಣಾಂತ ಉಪವಾಸ ಸತ್ಯಾಗ್ರಹ 51ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರವು ಯಾವುದನ್ನೂ ಕೇಳಲು ಸಿದ್ಧವಿಲ್ಲ ಅಥವಾ ಮಾತುಕತೆಗೂ ಮುಂದಾಗಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಭಾವುಕ ರೈತರು ದಲ್ಲೆವಾಲ್ ಅವರಂತೆ ಶಾಂತಿಯುತವಾಗಿ ಅನಿರ್ದಿಷ್ಟ ಉಪವಾಸವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.
ಪೊಲೀಸರು ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಪ್ರತಿಭಟನಾ ಸ್ಥಳದಲ್ಲಿ ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ಹೇರುವ ಬಗ್ಗೆ ಅವರಿಗೆ ತಿಳಿಸಿದ್ದಾರೆ. ನಾವು ಅತ್ಯಂತ ಸಂಯಮ ತೋರಿಸುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕ್ರಮ ಕೈಗೊಳ್ಳದಂತೆ ರೈತ ಮುಖಂಡರಿಗೆ ಮನವಿ ಮಾಡಿದ್ದೇವೆ ಎಂದು ಹರಿಯಾಣ ಪೊಲೀಸ್ DSP ಅಮಿತ್ ಬಾಟಿಯಾ ಹೇಳಿದರು.
ಇದನ್ನು ದೃಢಪಡಿಸಿದ ರೈತ ಮುಖಂಡ ಕಾಕಾ ಸಿಂಗ್ ಕೊತ್ರಾ, ರೈತರು ದೆಹಲಿ ಕಡೆಗೆ ಸಾಗುತ್ತಿಲ್ಲ. ಆದರೆ ಪ್ರತಿಭಟನಾ ಸ್ಥಳದಲ್ಲಿ ಕುಳಿತು ಶಾಂತಿಯುತವಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಪೊಲೀಸರು ಬಲ ಪ್ರಯೋಗಿಸಲು ಮುಕ್ತರಾಗಿದ್ದಾರೆ. ಅಶ್ರುವಾಯು ಬಳಸು ಅಥವಾ ರೈತರನ್ನು ಬಂಧಿಸಬಹುದು ಹೇಳಿದ್ದೇವೆ. ಆದರೆ, ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದರು.















Comments