ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ವಿವಾದಾತ್ಮಕ ಹೇಳಿಕೆ : ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
- Ananthamurthy m Hegde
- Dec 10, 2024
- 2 min read

ಪ್ರಯಾಗ್‌ರಾಜ್: ''ಇದು ಹಿಂದೂಸ್ತಾನ. ಈ ದೇಶವು ಬಹುಸಂಖ್ಯಾತರ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ,'' ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಗುರಿಯಾಗಿದೆ. ನ್ಯಾಯಮೂರ್ತಿಗಳ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ನ್ಯಾ. ಶೇಖರ್ ಕುಮಾರ್ ಯಾದವ್ ಅವರು, ''ಇದು ಹಿಂದೂಸ್ತಾನ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ದೇಶವು ಕಾರ್ಯನಿರ್ವಹಿಸುತ್ತದೆ. ಇದು ಕಾನೂನು. ಇದನ್ನು ಕುಟುಂಬ ಅಥವಾ ಸಮಾಜದ ಹಿನ್ನೆಲೆಯಲ್ಲಿ ನೋಡಿ. ಬಹುಸಂಖ್ಯಾತರ ಯೋಗಕ್ಷೇಮ ಮತ್ತು ಸಂತೋಷಕ್ಕೆ ಏನು ಪ್ರಯೋಜನವಾಗುತ್ತದೆಯೋ ಅದನ್ನೇ ಸ್ವೀಕರಿಸಲಾಗುತ್ತದೆ,'' ಎಂದು ಹೇಳಿದರು.
ಮುಸ್ಲಿಂ ಸಮುದಾಯವನ್ನು ನೇರವಾಗಿ ಉಲ್ಲೇಖಿಸದೇ ತಮ್ಮ ಭಾಷಣದಲ್ಲಿ ನ್ಯಾ. ಯಾದವ್ ಅವರು, ''ತ್ರಿವಳಿ ತಲಾಕ್, ಬಹುಪತ್ನಿತ್ವ, ಹಲಾಲ್‌ನಂಥ ಆಚರಣೆಗಳು ಸ್ವೀಕರಾರ್ಹವಲ್ಲ,'' ಎಂದರು.
''ಇಂಥ ಆಚರಣೆಗಳಿಗೆ ನಮ್ಮ ವೈಯಕ್ತಿಕ ಕಾನೂನು ಅವಕಾಶ ನೀಡುತ್ತದೆ ಎಂದು ನಿರ್ದಿಷ್ಟ ಸಮುದಾಯದವರು ಹೇಳಿದರೆ ಅದನ್ನು ಒಪ್ಪಿಕೊಳ್ಳಲಾಗದು. ನಮ್ಮ ಶಾಸ್ತ್ರಗಳಲ್ಲಿ ಮಹಿಳೆಯನ್ನು ದೇವತೆ ಎಂದು ಕರೆದಿರುವಾಗ ಅವರನ್ನು ಅಪಮಾನಿಸಲಾಗದು. ನಾಲ್ವರು ಪತ್ನಿಯರನ್ನು ಹೊಂದುವ ಹಕ್ಕನ್ನು ಪ್ರತಿಪಾದಿಸಲಾಗದು. ಏಕರೂಪ ನಾಗರಿಕ ಸಂಹಿತೆಯನ್ನು ಕೇವಲ ವಿಎಚ್‌ಪಿ, ಆರೆಸ್ಸೆಸ್ ಅಥವಾ ಹಿಂದುತ್ವದ ದೃಷ್ಟಿಕೋನದಿಂದ ನೋಡಬಾರದು,'' ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ದಿನೇಶ್ ಪಾಠಕ್ ಕೂಡ ಉಪಸ್ಥಿತರಿದ್ದರು.
ಹಿಂದೂ ಧರ್ಮದಲ್ಲಿ ಬಾಲ್ಯ ವಿವಾಹ ಹಾಗೂ ಸತಿಯಂತಹ ಸಾಮಾಜಿಕ ಪಿಡುಗುಗಳಿದ್ದವು. ಆದರೆ ರಾಮ ಮೋಹನ್ ರಾಯ್ ಅವರಂತಹ ಸುಧಾರಕರು ಇಂತಹ ಆಚರಣೆಗಳನ್ನು ಅಂತ್ಯಗಾಣಿಸಲು ಹೋರಾಡಿದರು ಎಂದರು.
ಇತರೆ ಸಮುದಾಯದವರು ಇದೇ ಸಂಸ್ಕೃತಿ ಹಾಗೂ ಸಂಪ್ರದಾಯ ಅನುಸರಿಸಬೇಕು ಎಂಬುದನ್ನು ಹಿಂದೂಗಳು ನಿರೀಕ್ಷಿಸುವುದಿಲ್ಲ. ಆದರೆ ಅವರು ಈ ದೇಶದ ಸಂಸ್ಕೃತಿಯನ್ನು, ಮಹಾನ್ ವ್ಯಕ್ತಿತ್ವಗಳನ್ನು ಹಾಗೂ ಈ ನೆಲದ ದೇವರನ್ನು ಅಗೌರವಿಸದೆ ಇರುವುದನ್ನು ಖಂಡಿತಾ ನಿರೀಕ್ಷಿಸುತ್ತಾರೆ ಎಂದರು.
"ನಮ್ಮ ದೇಶದಲ್ಲಿ ಸಣ್ಣ ಪ್ರಾಣಿಗಳಿಗೆ ಕೂಡ ನೋವು ಮಾಡದಂತೆ, ಇರುವೆಗಳನ್ನೂ ಸಾಯಿಸದಂತೆ ನಮಗೆ ಕಲಿಸಲಾಗಿದೆ. ಈ ಪಾಠ ನಮ್ಮಲ್ಲಿ ಆಳವಾಗಿ ಬೇರೂರಿದೆ. ಬಹುಶಃ ಈ ಕಾರಣಕ್ಕಾಗಿ ನಾವು ಬಹಳ ಸಹಿಷ್ಣುಗಳು ಮತ್ತು ಸಹಾನುಭೂತಿ ಉಳ್ಳವರಾಗಿದ್ದೇವೆ. ಬೇರೆಯವರು ಸಂಕಷ್ಟದಲ್ಲಿದ್ದಾಗ ನಾವೂ ನೋವು ಅನುಭವಿಸುತ್ತೇವೆ. ಆದರೆ ನಿಮ್ಮ ಸಂಸ್ಕೃತಿಯಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಪ್ರಾಣಿಗಳ ವಧೆಯನ್ನು ನೋಡುತ್ತಾರೆ. ಅವರು ಸಹಿಷ್ಣು ಹಾಗೂ ಕರುಣಾಮಯಿಗಳಾಗುತ್ತಾರೆ ಎಂದು ನಿರೀಕ್ಷಿಸುವುದಾದರೂ ಹೇಗೆ?" ಎಂದು ಪ್ರಶ್ನಿಸಿದರು.
ರಾಷ್ಟ್ರವ್ಯಾಪಿ ಯುಸಿಸಿ ಜಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ ಅವರು, ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕ ಸಮಯ ಹಿಡಿಯಿತು. ಆದರೆ ಒಂದು ದೇಶ ಎಂದಾಗ, ಅದಕ್ಕೆ ಒಂದೇ ಕಾನೂನು, ಒಂದೇ ದಂಡ ಸಂಹಿತೆ ಇರುತ್ತದೆ ಎನ್ನುವುದು ಸ್ಪಷ್ಟವಾಗುವ ದಿನಗಳ ದೂರವಿಲ್ಲ. ವಂಚಿಸಲು ಅಥವಾ ತಮ್ಮದೇ ಅಜೆಂಡಾ ನಡೆಸಲು ಪ್ರಯತ್ನಿಸುವವರು ಹೆಚ್ಚು ಸಮಯ ಉಳಿಯಲಾರರು ಎಂದರು.
ನ್ಯಾ. ಯಾದವ್ ಹೇಳಿಕೆಗೆ ವ್ಯಾಪಕ ಖಂಡನೆ ಹಾಗೂ ಟೀಕೆ ವ್ಯಕ್ತವಾಗಿದೆ. ಈ ಸಂಬಂಧ ಸಿಜೆಐ ಹಾಗೂ ರಾಷ್ಟ್ರಪತಿಗೆ ಪತ್ರ ಬರೆದಿರುವ ಅಖಿಲ ಭಾರತ ನ್ಯಾಯವಾದಿಗಳ ಒಕ್ಕೂಟ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಅವರ ಭಾಷಣವು ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣಕ್ಕೆ ಸಮನಾಗಿದೆ ಎಂದು ಅದು ಆರೋಪಿಸಿದೆ.















Comments