top of page

ಆಟೊಮೊಬೈಲ್‌ ವಲಯದಲ್ಲಿ ಬಂಡವಾಳ ಹೂಡಿಕೆಗೆ ಭಾರತ ಪ್ರಶಸ್ತ ತಾಣ: ಮೋದಿ

  • Writer: Ananthamurthy m Hegde
    Ananthamurthy m Hegde
  • Jan 18
  • 1 min read

ಹೊಸದಿಲ್ಲಿ: ದೇಶದಲ್ಲಿ ವರ್ಷಕ್ಕೆ 2.5 ಕೋಟಿ ವಾಹನಗಳು ಮಾರಾಟವಾಗುತ್ತಿವೆ. ನಾಲ್ಕು ವರ್ಷಗಳಲ್ಲಿ ಆಟೊಮೊಬೈಲ್‌ ವಲಯದಲ್ಲಿ 3.11 ಲಕ್ಷ ಕೋಟಿ ರೂ. ವಿದೇಶಿ ನೇರ ಬಂಡವಾಳ ಆಕರ್ಷಿಸಲಾಗಿದೆ. ಹೀಗಾಗಿ ಭವಿಷ್ಯದಲ್ಲಿ ಈ ವಲಯದಲ್ಲಿ ಬಂಡವಾಳ ಹೂಡಿಕೆಗೆ ಭಾರತವು ಪ್ರಶಸ್ತ ತಾಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ಮಂಟಪದಲ್ಲಿ ಶುಕ್ರವಾರ ಆರಂಭವಾದ ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೊ-2025ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ree

''ನಮ್ಮ ಸರಕಾರ 'ಮೇಕ್‌ ಇನ್‌ ಇಂಡಿಯಾ'ಕ್ಕೆ ಹೆಚ್ಚು ಒತ್ತು ನೀಡಿದೆ. ಇದು ದೇಶದ ಆಟೊಮೊಬೈಲ್‌ ವಲಯ ಅಭಿವೃದ್ಧಿಗೆ ನಿರ್ಣಾಯಕ ಪಾತ್ರವಹಿಸಲಿದೆ. ಜಾಗತಿಕ ಬೆಳವಣಿಗೆಗೂ ನೆರವಾಗಲಿದೆ. ಇದರಡಿ 2.25 ಲಕ್ಷ ಕೋಟಿ ರೂ. ಮೌಲ್ಯದ ಮಾರಾಟ ವಹಿವಾಟು ನಡೆದಿದೆ. 1.5 ಲಕ್ಷ ನೇರ ಉದ್ಯೋಗಗಗಳು ಸೃಷ್ಟಿಯಾಗಿವೆ," ಎಂದರು.

ಐದು ದಿನ ಪ್ರದರ್ಶನ

ಐದು ದಿನಗಳವರೆಗೆ ನಡೆಯುವ ಈ ಪ್ರದರ್ಶನದಲ್ಲಿ ವಿವಿಧ ಕಂಪನಿಗಳಿಂದ 100ಕ್ಕೂ ಹೆಚ್ಚು ಹೊಸ ವಾಹನಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ವಾಹನ ತಯಾರಕರು, ಎಲೆಕ್ಟ್ರಾನಿಕ್‌ ಬಿಡಿಭಾಗಗಳು, ಟೈರ್‌, ಬ್ಯಾಟರಿ ತಯಾರಕರು, ಆಟೊಮೋಟಿವ್‌ ಕಂಪನಿಗಳು ಮತ್ತು ಉಪಕರಣಗಳ ಮರುಬಳಕೆ ಮಾಡುವ ಕಂಪನಿಗಳು ಒಂದೇ ವೇದಿಕೆಯಲ್ಲಿ ಸೇರಲಿವೆ.

ಆಟೊ ಮೊಬೈಲ್‌ ಸಾಧನೆ: ಮೋದಿ ನೋಟ

  • ಕಳೆದ ಒಂದು ವರ್ಷದಲ್ಲಿ ದೇಶದ ಆಟೊಮೊಬೈಲ್‌ ವಲಯದ ಬೆಳವಣಿಗೆಯು ಶೇ. 12ರಷ್ಟು ಬೆಳವಣಿಗೆ ಕಂಡಿದೆ. ರಫ್ತು ವಹಿವಾಟಿನಲ್ಲೂಏರಿಕೆಯಾಗಿದೆ

  • ಭಾರತವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೂರನೇ ಅತಿದೊಡ್ಡ ಪ್ರಯಾಣಿಕ ವಾಹನಗಳ ಮಾರುಕಟ್ಟೆಯಾಗಿದೆ

  • ಕಳೆದ ಒಂದು ದಶಕದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಮಾರಾಟದಲ್ಲಿ 640 ಪಟ್ಟು ಏರಿಕೆಯಾಗಿದೆ

  • ಕಳೆದ ಹತ್ತು ವರ್ಷದ ಹಿಂದೆ ವಾರ್ಷಿಕ 2,600 ವಿದ್ಯುತ್‌ ಚಾಲಿತ ವಾಹನಗಳು ಮಾರಾಟವಾಗುತ್ತಿದ್ದವು.

  • 2024ರಲ್ಲಿ 16.8 ಲಕ್ಷ ಇ-ವಾಹನಗಳು ಮಾರಾಟವಾಗಿವೆ.

ಟಾಟಾ ಮೋಟಾರ್ಸ್‌ ನಾವೀನ್ಯತೆ

ಟಾಟಾ ಮೋಟಾರ್ಸ್‌ ಶುಕ್ರವಾರ ಆರಂಭವಾದ 'ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೊ'ದಲ್ಲಿ ಇಸಿಎ ಸಿಯೆರಾ, ಹ್ಯಾರಿಯರ್‌ ಎಲೆಕ್ಟ್ರಿಕ್‌ ಆವೃತ್ತಿ ಮತ್ತು ಅವಿನ್ಯಾ ಎಕ್ಸ್‌ ಹೊಸ ಆವೃತ್ತಿಗಳನ್ನು ಪ್ರದರ್ಶಿಸಿತು. ಇವು ಎಲ್ಲರ ಗಮನ ಸೆಳೆದವು. ಸಿಯೆರಾ ಇವಿ 1990ರ ಮೂಲ ಸಿಯೆರಾದೊಂದಿಗೆ ಗುರುತಿಸುವ ಗುಣಲಕ್ಷಣಗಳನ್ನು ಒಳಗೊಂಡಿದೆ. ಚಕ್ರ ಕಮಾನುಗಳು, ಹೈ ಸೆಟ್‌ ಬಾನೆಟ್‌ ಹೊಂದಿದೆ. ಹ್ಯಾರಿಯರ್‌ ಇವಿ ಹ್ಯಾರಿಯರ್‌ ಐಸಿಇನಂತೆ ಕಾಣುತ್ತದೆ.

ಇ- ವಿಟಾರಾ ಪ್ರದರ್ಶನ

ಮಾರುತಿ ಸುಜುಕಿ ಇ ವಿಟಾರಾವನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಿದೆ. ಇತರ ಮಾರುತಿ ಸುಜುಕಿ ಮಾದರಿಗಳಿಗಿಂತ ಇದು ಭಿನ್ನವಾಗಿದೆ. ಇದು ಪೂರ್ಣವಾಗಿ ಎಲೆಕ್ಟ್ರಿಕ್‌ ಎಸ್‌ಯುವಿಯಾಗಿದ್ದು, ಇದೊಂದು ಪಕ್ಕಾ ಸ್ವದೇಶಿ ನಿರ್ಮಿತವಾಗಿದೆ. ಇದರ ಬೆಲೆಯನ್ನು ಇನ್ನೂ ಕಂಪನಿ ಪ್ರಕಟಿಸಿಲ್ಲ. ಆದರೆ ಹೈಬ್ರಿಡ್‌ ಗ್ರ್ಯಾಂಡ್‌ ವಿಟಾರಾಕ್ಕಿಂತ ದುಬಾರಿಯಾಗಲಿದೆ.

ಇದರಲ್ಲಿಎಲ್‌ಇಪಿ ಬ್ಲೇಡ್‌ ಬ್ಯಾಟರಿಗಳನ್ನು ಬಳಸಲಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 500 ಕಿ.ಮೀ ಸಂಚರಿಸಬಹುದು. ಏಳು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.

Comments


Top Stories

bottom of page