top of page

ಇಂಡೋ-ಪಾಕ್ ಉದ್ವಿಗ್ನತೆ; ಪ್ರಧಾನಿ ಮೋದಿ ಭೇಟಿಯಾದ ರಕ್ಷಣಾ ಕಾರ್ಯದರ್ಶಿ

  • Writer: Ananthamurthy m Hegde
    Ananthamurthy m Hegde
  • May 5
  • 1 min read

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಇದರ ನಡುವಲ್ಲೇ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸೋಮವಾರ ಭೇಟಿಯಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಶನಿವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅವರು ಪ್ರಧಾನಿ ಮೋದಿ ಅವರನ್ನು ರಾಷ್ಟ್ರ ರಾಜಧಾನಿ ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಮೋದಿಯವರನ್ನು ಭೇಟಿ ಮಾಡಿರುವುದು, ಕುತೂಹಲ ಕೆರಳಿಸಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾಗಿದ್ದು, ಈ ಘಟನೆಗೆ ಭಾರತವನ್ನು ಕೆರಳುವಂತೆ ಮಾಡಿದೆ.

ಉಗ್ರರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ದಾಳಿ ನಡೆದ ಮರುದಿನವೇ ಸಂಪುಟ ಸಮಿತಿಯ (ಸಿಸಿಎಸ್‌) ಸಭೆಯ ನಡೆಸಿತ್ತು.

ಉಗ್ರ ದಾಳಿಗೆ ಬಲವಾಗಿ ಪ್ರತಿಕ್ರಿಯಿಸಲು ತಂತ್ರ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಸರ್ಕಾರವು ಈ ಸಭೆ ನಡೆಸಿದ್ದು, ಸಭೆಯಲ್ಲಿ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಪರಮಾಧಿಕಾರವನ್ನು ನೀಡಿತ್ತು.

ಭಯೋತ್ಪಾದಕ ದಾಳಿಯ ರೂವಾರಿಗಳ ವಿರುದ್ಧ ಸರ್ಕಾರವು ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆಂದು ವಿರೋಧ ಪಕ್ಷಗಳು ತಿಳಿಸಿದ್ದವು.

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ಯಶಸ್ವಿಯಾಗಿ ನಡೆದ ನಂತರ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಕಾರ್ಯಗಳು ಉತ್ತಮವಾದ ಹಿನ್ನೆಲೆಯಲ್ಲಿ ಉಗ್ರರ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments


Top Stories

bottom of page