top of page

ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು : ಮಮತಾ ಬ್ಯಾನರ್ಜಿಗೆ ನಾಯಕತ್ವ ನೀಡಲು ಆಗ್ರಹ

  • Writer: Ananthamurthy m Hegde
    Ananthamurthy m Hegde
  • Dec 11, 2024
  • 1 min read


ಇಂಡಿಯಾ ಮೈತ್ರಿಕೂಟದಲ್ಲಿ ದಿನದಿಂದ ದಿನಕ್ಕೆ ಬಿರುಕು ಹೆಚ್ಚಾಗ್ತಿದೆ. ಇಷ್ಟು ದಿನ ಇಂಡಿಯಾ ಒಕ್ಕೂಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ಈಗ ಅದೇ ಮೈತ್ರಿಕೂಟದಲ್ಲಿ ಮೂಲೆಗುಂಪಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದರೊಂದಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ನಾಯಕತ್ವಕ್ಕೂ ಕೂಡ ಕೊಕ್ಕೆ ಬೀಳುವ ಸಾಧ್ಯತೆ ಕಾಣುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇಂಡಿಯಾ ಒಕ್ಕೂಟದ ನಾಯಕತ್ವ ನೀಡಬೇಕು ಎಂಬ ಕೂಗು ಜೋರಾಗುತ್ತಿದೆ. ಇಂಡಿಯಾ ಒಕ್ಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ವಿರುದ್ಧ ಗರಂ ಆಗಿವೆ. ಇದು ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿಗೆ ಸಂಕಷ್ಟ ತಂದೊಡ್ಡಿದ್ದು, ಮೈತ್ರಿಕೂಟದ ಭವಿಷ್ಯ ಅನಿಶ್ಚಿತತೆಗೆ ಜಾರಿದಂತೆ ಕಾಣುತ್ತಿದೆ.ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗಷ್ಟೇ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದರು. ಆಗ ನಾನು ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಲು ಸಿದ್ಧ ಎಂದು ಹೇಳಿದ್ದರು. ಅದಲ್ಲದೇ ಇಂಡಿಯಾ ಒಕ್ಕೂಟದ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಕಾಂಗ್ರೆಸ್‌ ಮಾಡಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಮಮತಾ ಬ್ಯಾನರ್ಜಿಗೆ ಇಂಡಿಯಾ ಬ್ಲಾಕ್‌ನ ನಾಯಕತ್ವ ನೀಡಬೇಕು ಎಂದು ದನಿಯೆತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿದ್ರು ಸಮಸ್ಯೆ ಇಲ್ಲ ಎಂದು ಹೇಳಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಇದಷ್ಟೇ ಅಲ್ಲದೇ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಅವರ ಬಂಡಾಯ ಕೂಡ ಕಾಂಗ್ರೆಸ್‌ ಎದುರಿಸುತ್ತಿದ್ದು, ಮುಂದೆ ಏನಾಗುತ್ತದೆ ಎಂಬ ಪ್ರಶ್ನೆ ಅದನ್ನು ಕಾಡುತ್ತಿದೆ.ಇಂಡಿಯಾ ಒಕ್ಕೂಟದ ನಾಯಕತ್ವ ಮಮತಾಗೆ ನೀಡಿ!ಬಿಹಾರದ ಮಾಜಿ ಸಿಎಂ, ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್‌ ಯಾದವ್‌, ನಾವು ಮಮತಾ ಬ್ಯಾನರ್ಜಿಗೆ ಸಪೋರ್ಟ್‌ ಮಾಡ್ತೀವಿ, ಇಂಡಿಯಾ ಒಕ್ಕೂಟದ ನಾಯಕತ್ವವನ್ನು ಮಮತಾ ಬ್ಯಾನರ್ಜಿಗೆ ನೀಡಬೇಕು. ಇಲ್ಲಿ ಕಾಂಗ್ರೆಸ್‌ ವಿರೋಧ ಲೆಕ್ಕಕ್ಕೆ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ಕೂಡ ಮಮತಾ ಬ್ಯಾನರ್ಜಿ ದೇಶದ ಸಮರ್ಥ ನಾಯಕರಲ್ಲಿ ಒಬ್ಬರಾಗಿದ್ದು, ಇಂಡಿಯಾ ಒಕ್ಕೂಟದ ಲೀಡರ್‌ಶಿಪ್‌ ಬಗ್ಗೆ ಮಾತನಾಡುವ ಹಕ್ಕನ್ನು ಹೊಂದಿದ್ದಾರೆ ಎನ್ನುವ ಮೂಲಕ ದೀದಿ ಪರ ಬ್ಯಾಟ್‌ ಬೀಸಿದ್ದರು. ಈ ಇಬ್ಬರು ಧುರೀಣರ ಹೇಳಿಕೆಗಳು ಕಾಂಗ್ರೆಸ್‌ ಅನ್ನು ನಿಜಕ್ಕೂ ಕಂಗೆಡಿಸಿದ್ದು, ಮುಂದೇನಪ್ಪ ಕಥೆ ಎಂಬ ಆತಂಕ ಕೈಪಡೆಯಲ್ಲಿ ಮನೆ ಮಾಡಿದಂತೆ ಕಾಣುತ್ತಿದೆ.

Comments


Top Stories

bottom of page