ಇತಿಹಾಸದಲ್ಲೇ ಅಪೂರ್ವ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಶಬರಿಮಲೆ ದೇವಾಲಯ!
- Ananthamurthy m Hegde
- Jul 7
- 2 min read
ತಿರುವನಂತಪುರಂ : ನಾಡಿನ ಪ್ರಸಿದ್ದ ಹಿಂದೂ ದೇವಾಲಯ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನವು ಅಪೂರ್ವ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಈ ತಿಂಗಳಲ್ಲಿ ಅಂದರೆ ಜುಲೈ ಮಾಸದಲ್ಲಿ ದೇವಾಲಯ ವಿವಿಧ ದಿನಾಂಕದಂದು ವಿವಿಧ ಸಾಂಪ್ರದಾಯಿಕ ಪೂಜಾಪದ್ದತಿಯನ್ನು ಪಾಲಿಸಲು ಮೂರು ಬಾರಿ ತೆರೆಯಲಿದೆ.
ಚಾರ್ ಧಾಮ್ ಕ್ಷೇತ್ರದಂತೆ ಶಬರಿಮಲೆ ದೇವಾಲಯ ವರ್ಷದ ಎಲ್ಲಾ ದಿನವೂ ತೆರೆದಿರುವುದಿಲ್ಲ. ನಿರ್ದಿಷ್ಟ ದಿನದಂದು ಮಾತ್ರ ಬಾಗಿಲು ತೆರೆದಿರುತ್ತದೆ. ಈ ಪೈಕಿ, ಮಕರ ಸಂಕ್ರಾಂತಿ, ಜ್ಯೋತಿಯ ದಿನದಂದು ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ವರ್ಷದ ನವೆಂಬರ್ - ಜನವರಿಯ ಸಮಯದಲ್ಲಿ ಮಂಡಲಪೂಜೆ ಮಹೋತ್ಸವ, ಮಕರವಿಳಕ್ಕು ಉತ್ಸವ ಮತ್ತು ಮಕರ ವಿಳಕ್ಕು ಸಮಯದಲ್ಲಿ ದೇವಾಲಯದ ಬಾಗಿಲು ತೆರೆದಿರುತ್ತದೆ. ಈ ಬಾರಿ ಇದೇ ತಿಂಗಳು ಅಂದರೆ ಜುಲೈನಲ್ಲಿ ಒಟ್ಟು ಮೂರು ಬಾರಿ ದೇವಾಲಯ ತೆರಲಿದೆ. ಇದು, ತೀರಾ ಅಪರೂಪದ ವಿದ್ಯಮಾನ ಎಂದು ದೇವಾಲಯದ ಪ್ರಕಟಣೆ ಹೇಳಿದೆ.
ಜುಲೈ ಮಾಸದಲ್ಲಿ ಮೂರು ಬಾರಿ ಎಂಟು ದಿನಗಳು ಮಾತ್ರ ದೇವಾಲಯ ತೆರೆಯಲಿದೆ. ನವಗ್ರಹ ಪೂಜೆ, ಕರ್ಕಾಟಕ ಪೂಜೆ ಮತ್ತು ನಿರಪುತ್ತರಿ ಸೇವೆಗಾಗಿ ದೇವಸ್ಥಾನವನ್ನು ತೆರೆಯಲಾಗುತ್ತದೆ. ನವಗ್ರಹ ದೇವಾಲಯವನ್ನು ಹೊಸದಾಗಿ ತೆರೆಯಲಾಗಿದೆ.
ಜನಸಂದಣಿಯನ್ನು ನಿಯಂತ್ರಿಸಲು ವರ್ಚುವಲ್ ಕ್ಯೂ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜುಲೈ 11, 16 ಮತ್ತು 29ರಂದು ದೇವಾಲಯ ತೆರೆಯಲಿದೆ. ಕೃಷಿ ಚಟುವಟಿಕೆಗಳು ಸಸೂತ್ರವಾಗಿ ನಡೆಯಲು ಜುಲೈ 30ರಂದು ವಿಶೇಷ ಪೂಜೆಯನ್ನು ಅಯ್ಯಪ್ಪಸ್ವಾಮಿಗೆ ನಡೆಸಲಾಗುತ್ತದೆ.
ಸಮೃದ್ದಿ ಮತ್ತು ಕೃಷಿ ಫಲವತ್ತತೆಗಾಗಿ ಸಾಮಾನ್ಯವಾಗಿ ಕೇರಳದ ಮನೆಮನೆಯಲ್ಲಿ ಅಕ್ಕಿಧಾನ್ಯಗಳ ಸಣ್ಣ ಕಟ್ಟನ್ನು ತಳಿರುತೋರಣದ ರೀತಿಯಲ್ಲಿ ಕಟ್ಟುತ್ತಾರೆ. ಮೊದಲು ಅಯ್ಯಪ್ಪನ ಸನ್ನಿಧಾನದಲ್ಲಿ ಈ ಪೂಜಾ ಕೈಂಕರ್ಯ ನಡೆದ ನಂತರ ಮಲೆಯಾಳಿಗಳು ತಮ್ಮ ಮನೆಯಲ್ಲಿ ಈ ವಿಧಿವಿಧಾನವನ್ನು ಮಾಡುತ್ತಾರೆ. ಪೂಜಾ ದಿನಗಳ ಮಾಹಿತಿ ಹೀಗಿದೆ:
ಜುಲೈ 11 - 13, 2025
ನವಗ್ರಹದ ಪ್ರತಿಷ್ಠಾಪನೆ ಕಾರ್ಯಕ್ರಮ
ಜುಲೈ 11 - ಸಂಜೆ ಐದು ಗಂಟೆಗೆ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ.
ಜುಲೈ 12 - ಸಾಂಪ್ರದಾಯಿಕ ಪೂಜೆ
ಜುಲೈ 13 - ನವಗ್ರಹ ಪ್ರತಿಷ್ಠೆ (ಬೆಳಗ್ಗೆ ಹನ್ನೊಂದರಿಂದ, ಮಧ್ಯಾಹ್ನ ಹನ್ನೆರಡು ಗಂಟೆಯ ಅವಧಿಯಲ್ಲಿ), ರಾತ್ರಿ 10 ಗಂಟೆಗೆ ದೇವಾಲಯ ಮುಚ್ಚಲಿದೆ.
ಜುಲೈ 16 - 21, 2025
ಕರ್ಕಾಟಕ ಮಾಸ ಪೂಜೆ
ಜುಲೈ 21ರಂದು ರಾತ್ರಿ ಹತ್ತು ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಿದೆ.
ಜುಲೈ 29 - 30, 2025
ನಿರಪುತ್ತರಿ ಸೇವೆ
ಜುಲೈ 29 - ಸಂಜೆ ಐದು ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದೆ
ಜುಲೈ 30 - ಬೆಳಗ್ಗೆ 5.30 ರಿಂದ 6.30ರ ಅವಧಿಯಲ್ಲಿ ಸ್ವಾಮಿಗೆ ನಿರಪುತ್ತರಿ ಸೇವೆ, ರಾತ್ರಿ ಹತ್ತು ಗಂಟೆಗೆ ಬಾಗಿಲು ಮುಚ್ಚಲಿದೆ.
ಆಗಸ್ಟ್ ತಿಂಗಳಲ್ಲಿ ಚಿಂಗಂ ಪೂಜೆ, ಸೆಪ್ಟಂಬರ್ ನಲ್ಲಿ ಓಣಂ ಉತ್ಸವ, ಕನ್ನಿಪೂಜೆ, ಅಕ್ಟೋಬರ್ ತುಲಾಮಾಸ ಪೂಜೆ, ಚಿತ್ರೈ ತಿರುನಾನ್ ಆಟ್ಟ ಉತ್ಸವ ಪೂಜೆಗಾಗಿ ಶಬರಿಮಲೆ ದೇವಾಲಯದ ಬಾಗಿಲು ತೆರೆಯಲಿದೆ ಎಂದು ದೇವಾಲಯದ ವೆಬ್ಸೈಟಿನಲ್ಲಿ ಹೇಳಲಾಗಿದೆ.















Comments