top of page

ಉಪ ರಾಷ್ಟ್ರಪತಿ ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳಿಂದ ನೋಟಿಸ್

  • Writer: Ananthamurthy m Hegde
    Ananthamurthy m Hegde
  • Dec 10, 2024
  • 1 min read

ನವದೆಹಲಿ: ಸದನವನ್ನು ಪಕ್ಷಾತೀತವಾಗಿ ನಡೆಸದ ಆರೋಪದ ಮೇಲೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಪದಚ್ಯುತಗೊಳಿಸುವಂತೆ ಪ್ರತಿಪಕ್ಷಗಳು ಮಂಗಳವಾರ ನೋಟಿಸ್‌ ಸಲ್ಲಿಸಿವೆ.

ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ನಾಸೀರ್ ಹುಸೇನ್ ಅವರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೋದಿ ಅವರಿಗೆ ನೋಟಿಸ್ ಸಲ್ಲಿಸಿದ್ದಾರೆ.

ಉಪ ರಾಷ್ಟ್ರಪತಿ ಧಂಖರ್ ಅವರು ರಾಜ್ಯಸಭೆಯ ಪದನಿಮಿತ್ತ ಸಭಾಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ-ಎಂ, ಜೆಎಂಎಂ, ಎಎಪಿ, ಡಿಎಂಕೆ ಸೇರಿದಂತೆ ಸುಮಾರು 60 ವಿರೋಧ ಪಕ್ಷದ ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಕಾಂಗ್ರೆಸ್‌ನ ಉನ್ನತ ನಾಯಕರು ನೋಟಿಸ್‌ಗೆ ಸಹಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿವಿಧ ವಿರೋಧ ಪಕ್ಷಗಳ ಸದನದ ನಾಯಕರು ಸಹ ಸಹಿ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಪಕ್ಷಪಾತಿಯಾಗಿದ್ದು, ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಇಂಡಿಯಾ ಬ್ಲಾಕ್‌ನ ಸಂಸದರು ಪದೇ ಪದೇ ಆರೋಪಿಸಿದ್ದಾರೆ. ಅವರು ತಮ್ಮ ಭಾಷಣಗಳಿಗೆ ಆಗಾಗ್ಗೆ ಅಡ್ಡಿಪಡಿಸುತ್ತಾರೆ, ಪ್ರಮುಖ ವಿಷಯಗಳ ಮೇಲಿನ ಚರ್ಚೆಯನ್ನು ನಿರ್ಬಂಧಿಸುತ್ತಾರೆ ಮತ್ತು ಮೇಲ್ಮನೆಯಲ್ಲಿ ವಿವಾದಾತ್ಮಕ ಚರ್ಚೆಗಳ ಸಮಯದಲ್ಲಿ ಸರ್ಕಾರದ ಪರವಾಗಿರುತ್ತಾರೆ ಎಂದು ಪ್ರತಿಪಕ್ಷಗಳ ಸಂಸದರು ಆರೋಪಿಸಿದ್ದಾರೆ.

Comments


Top Stories

bottom of page