top of page

ಒಂದು ದೇಶ ಒಂದು ಚುನಾವಣೆ : ೨೦೩೪ಕ್ಕೆ ಅನುಷ್ಠಾನ ಸಾಧ್ಯತೆ

  • Writer: Ananthamurthy m Hegde
    Ananthamurthy m Hegde
  • Dec 21, 2024
  • 1 min read
ree

ಹೊಸದಿಲ್ಲಿ: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದ 'ಒಂದು ದೇಶ-ಒಂದು ಚುನಾವಣೆ'ಯನ್ನು 2034ರಲ್ಲಿ ಅನುಷ್ಠಾನಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

2029 ಮತ್ತು 2034ರ ನಡುವಿನ ವಿಧಾನಸಭೆಗಳ ಅಧಿಕಾರಾವಧಿಯನ್ನು ಮೊಟಕು ಅಥವಾ ಲಂಬಿಸುವ ಮೂಲಕ ಒಟ್ಟಿಗೆ 2034ಕ್ಕೆ ಚುನಾವಣೆ ನಡೆಸಲು ಸರಕಾರ ಯೋಜಿಸಿದೆ. ಆದರೆ, 2029ಕ್ಕೆ ಮೊದಲು ಹೊಸ ಚುನಾವಣಾ ಪದ್ಧತಿ ಜಾರಿಗೆ ಅಗತ್ಯವಾಗಿರುವ ಸಂವಿಧಾನ ತಿದ್ದುಪಡಿ ವಿಧೇಯಕಗಳು ಸಂಸತ್ತಿನಲ್ಲಿ ಅನುಮೋದನೆಗೊಂಡರೆ ಮಾತ್ರ ಇದು ಸಾಧ್ಯವಾಗಲಿದೆ. ಅಲ್ಲದೆ, ಸವಾಲಿನ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯ ಕಾರಣದಿಂದಲೂ 2034ರವರೆಗೆ ಹೊಸ ಚುನಾವಣಾ ಪದ್ಧತಿ ಜಾರಿಯನ್ನು ಮುಂದೂಡಲು ಸರಕಾರ ನಿರ್ಧರಿಸಿದೆ.

ಈ ಮಧ್ಯೆ, ಏಕಕಾಲದಲ್ಲಿ ಚುನಾವಣೆ ನಡೆಸಲು ಪೂರ್ವಭಾವಿ ಅಗತ್ಯವಾಗಿ ಡಿ.17ರಂದು ಲೋಕಸಭೆಯಲ್ಲಿ ಮಂಡಿಸಲಾದ ಎರಡು ವಿಧೇಯಕಗಳನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸುವ ನಿರ್ಣಯವನ್ನು ಶುಕ್ರವಾರ ಲೋಕಸಭೆಯಲ್ಲಿ ಕೈಗೊಳ್ಳಲಾಗಿದೆ. ಸಂಸತ್‌ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಪೈಕಿ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಒಂದು ವಿಧೇಯಕವೂ ಸೇರಿದೆ.

ಡಿ.17ರಂದು ಸಂಸತ್ತಿನಲ್ಲಿ ಮಂಡಿಸಲಾದ ಈ ಉಭಯ ವಿಧೇಯಕಗಳಿಗೆ 269 ಪರ ಮತ್ತು 198 ವಿರೋಧ ಮತಗಳು ಬಿದ್ದವು. ಇವುಗಳನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ವಹಿಸಲು ಅಂದೇ ಪ್ರಸ್ತಾಪಿಸಲಾಗಿತ್ತು. ಈಗ ಈ ಸಂಬಂಧ ನಿರ್ಣಯವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

39 ಸದಸ್ಯರ ಜಂಟಿ ಸಂಸದೀಯ ಸಮಿತಿಯು ವಿಧೇಯಕಗಳನ್ನು ಪರಿಶೀಲನೆಗೆ ಒಳಪಡಿಸಿ, ಶಿಫಾರಸುಗಳನ್ನು ಲೋಕಸಭೆ ಸ್ಪೀಕರ್‌ಗೆ ಸಲ್ಲಿಸಲಿದೆ.

ಜಂಟಿ ಸಂಸದೀಯ ಸಮಿತಿಗೆ ರಾಜ್ಯಸಭೆಯ ಇನ್ನೂ 12 ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು, ಇದರೊಂದಿಗೆ ಒಟ್ಟು ಸದಸ್ಯರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಲೋಕಸಭೆಯಿಂದ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ವಾದ್ರಾ ಸೇರಿದಂತೆ 27 ಸದಸ್ಯರನ್ನು ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ. ಈ ಪೈಕಿ 12 ಬಿಜೆಪಿ ಹಾಗೂ ಐವರು ಬಿಜೆಪಿ ಬೆಂಬಲಿತ ಎನ್‌ಡಿಎ ಮೈತ್ರಿಕೂಟದ ಸಂಸದರಿದ್ದಾರೆ.

Comments


Top Stories

bottom of page