top of page

ಒಂದೂವರೆ ವರ್ಷದಲ್ಲಿ ೧೦ ಲಕ್ಷ ಖಾಯಂ ಸರಕಾರಿ ನೌಕರಿ ನೇಮಕಾತಿ

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read
ree

ನವದೆಹಲಿ: ಕಳೆದ ಒಂದೂವರೆ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ ಸುಮಾರು 10 ಲಕ್ಷ ಖಾಯಂ ಸರ್ಕಾರಿ ನೌಕರಿಯನ್ನು ಯುವ ಜನತೆಗೆ ಒದಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ರೋಜ್ ಗಾರ್ ಮೇಳದಲ್ಲಿ ನೇಮಕಾತಿಯಾದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂತಹ ಕಾರ್ಯಕ್ರಮದ ಮೂಲಕ ಇಷ್ಟೊಂದು ದಾಖಲೆ ಪ್ರಮಾಣದಲ್ಲಿ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಉದ್ಯೋಗ ನೀಡಿರಲಿಲ್ಲ ಎಂದು ಹೇಳಿದರು. ಈ ರೋಜ್ ಗಾರ್ ಮೇಳದಲ್ಲಿ 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ.

ಕೇಂದ್ರ ಸರ್ಕಾರದ ನೀತಿಗಳು, ಕಾರ್ಯಕ್ರಮಗಳಲ್ಲಿ ಯುವ ಜನತೆಗೆ ಆದ್ಯತೆ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಸ್ವಾವಲಂಬಿಯನ್ನಾಗಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದರು.

ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ನೀಡುವ ಸರ್ಕಾರದ ನಿರ್ಧಾರ ಅವರ ವೃತ್ತಿಜೀವನಕ್ಕೆ ಸಾಕಷ್ಟು ನೆರವಾಗಿದೆ. ಪ್ರಧಾನಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಯ ಬಹುತೇಕ ಮಾಲೀಕರು ಮಹಿಳೆಯರೇ ಆಗಿದ್ದಾರೆ.

ಭಾರತೀಯ ಯುವಕರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ. ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಅಥವಾ ಬಾಹ್ಯಾಕಾಶ ರಕ್ಷಣಾ ಕ್ಷೇತ್ರಗಳಲ್ಲಿನ ಸುಧಾರಣೆಗಳಂತಹ ಹಲವಾರು ಯೋಜನೆಗಳಲ್ಲಿ ಯುವ ಜನರೇ ತುಂಬಿದ್ದಾರೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಯುವಜನರ ಅಭಿವೃದ್ಧಿ, ಮಾತೃಭಾಷೆಯ ಬಳಕೆಗೆ ಒತ್ತು ನೀಡಿದೆ. ಯುವ ಜನತೆ 13 ಭಾರತೀಯ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ತೆಗೆದುಕೊಳ್ಳಬಹುದೆಂದು ಖಚಿತಪಡಿಸಿಕೊಳ್ಳುವ ಮೂಲಕ ಸರ್ಕಾರ ಭಾಷೆಗೆ ಅಡ್ಡಿಯಾಗುವುದಿಲ್ಲ ಎಂದು ಖಚಿತಪಡಿಸಿದೆ ಎಂದು ಅವರು ಹೇಳಿದರು.

ಇಂದು ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯಾಗಿದ್ದು, ಅವರ ಆಶಯದಂತೆ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸೃಷ್ಟಿಸಿ, ಸ್ವಯಂ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, 71,000 ನೇಮಕಾತಿಯಲ್ಲಿ ಶೇ.29 ರಷ್ಟು ಮಂದಿ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಹಿಂದುಳಿದ ವರ್ಗಗಳ ನೇಮಕಾತಿ ಮೋದಿ ಸರ್ಕಾರದ ಅವಧಿಯಲ್ಲಿ ಶೇ.27ರಷ್ಟು ಏರಿಕೆ ಕಂಡಿದೆ. ಇಂದಿನ ರೋಜ್ ಗಾರ್ ಮೇಳದ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕ್ರಮವಾಗಿ 15.8 ಮತ್ತು 9.6 ರಷ್ಟಿವೆ ಎಂದು ಹೇಳಿದರು.

Comments


Top Stories

bottom of page