ಕಾಂಗ್ರೆಸ್ ಸರಕಾರದ ಪ್ರತಿ ಸಹಿಯೂ ಮಾರಾಟಕ್ಕಿದೆ : ಕುಮಾರ ಸ್ವಾಮಿ ಆರೋಪ
- Ananthamurthy m Hegde
- Jan 11
- 1 min read
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದ್ದು, ಪ್ರತಿಯೊಂದು ಸಹಿಯನ್ನೂ ಮಾರಾಟಕ್ಕೆ ಇಟ್ಟಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಎಷ್ಟು ದುಡ್ಡು ತೆಗೆದುಕೊಳ್ಳಲಾಗುತ್ತಿದೆ ಎಂಬುದು ಗೊತ್ತಾ? ಎಲ್ಲಾ ಹುದ್ದೆಗಳಿಗೆ ದರ ನಿಗದಿ ಮಾಡಲಾಗಿದೆ. ಸರ್ಕಾರದಲ್ಲಿ ಶೇ.60 ಕಮಿಷನ್ ನಡೆಯತ್ತಿದೆ ಎಂದು ಕಿಡಿಕಾರಿದರು.
ಮಗ ಸೋತಿರುವುದಕ್ಕೆ ಹತಾಶನಾಗಿ ನಾನು ಈ ಆರೋಪ ಮಾಡುತ್ತಿದ್ದೇನೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ಅದು ಬಿಡಿ , ನಿಮ್ಮ ಕಂದಾಯ ಇಲಾಖೆಯಲ್ಲಿ ಪಡೆಯುತ್ತಿರುವ ಕಮಿಷನ್ ಬಗ್ಗೆ ಮಾತನಾಡಿ. ಕಂದಾಯ ಇಲಾಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ? "ಬೆಂಗಳೂರಿನ ಸಹಾಯಕ ಆಯುಕ್ತ ಹುದ್ದೆಗೆ ಎಷ್ಟು ಹಣ ಪಾವತಿಸಬೇಕು? ನೀವು ಎಷ್ಟು ನಿಗದಿಪಡಿಸಿದ್ದೀರಿ? ಈ ಪಾಲು ಯಾರೆಲ್ಲರಿಗೂ ಸಿಗುತ್ತದೆ? ಕಂದಾಯ ಇಲಾಖೆಯಲ್ಲಿನ ವ್ಯವಸ್ಥೆಯ ಬಗ್ಗೆ ನನಗೆ ತಿಳಿದಿದೆ. ಇದಕ್ಕೆ ಬೈರೇಗೌಡ ಉತ್ತರಿಸಲಿ ಎಂದು ಸವಾಲು ಹಾಕಿದರು.
ದಲಿತ ಶಾಸಕರ ಡಿನ್ನರ್ ಪಾರ್ಟಿಯ ಕುರಿತು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಡಿನ್ನರ್ ಪಾರ್ಟಿಯಲ್ಲಿ ಚರ್ಚೆಮಾಡುತ್ತಾರಂತೆ. ಹಾಗಿದ್ದಲ್ಲಿ ಸಚಿವ ಸಂಪುಟ ಸಭೆ ಏತಕ್ಕೆ ಬೇಕು ಎಂದು ಟೀಕಿಸಿದರು.
ಶೇ.60 ಕಮಿಷನ್ ಆರೋಪಕ್ಕೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಕೇಳುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು, ಗುತ್ತಿಗೆದಾರರೇ ಈ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಅವರನ್ನೇ ಕೇಳಿ ದಾಖಲೆ ಪಡೆದುಕೊಳ್ಳಲಿ ಎಂದರು.
‘ಸಿದ್ದರಾಮಯ್ಯ ಮಹಾನ್ ನಾಯಕರು. ಪೇಸಿಎಂ ಅಂತ ಪೋಸ್ಟರ್ ಅಂಟಿಸಲು ಹೋಗಿದ್ದರು. ಅವರು ಇಲ್ಲಿಯವರೆಗೆ ಜನರ ಮುಂದೆ ಯಾವ ದಾಖಲೆ ಇಟ್ಟಿದ್ದಾರೆ? ಕೆಂಪಣ್ಣ ಹೇಳಿದರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೆಂಪಣ್ಣ ಅವರಿಂದ ಅವರು ದಾಖಲೆ ಪಡೆದುಕೊಳ್ಳಬೇಕಿತ್ತಲ್ಲವೇ? ಕಮಿಷನ್ ಕೇಳದೇ ಇದ್ದರೆ ಈಗ ಗುತ್ತಿಗೆದಾರರು ಏಕೆ ಆರೋಪ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
Comments