ಕುವೈತ್ ಬ್ಯಾಂಕ್ ಗೆ ಪಂಗನಾಮ ಹಾಕಿದ ಕೇರಳಿಗರು
- Ananthamurthy m Hegde
- Dec 8, 2024
- 1 min read

ಕೊಟ್ಟಾಯಂ: ಕುವೈತ್ ನ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ 1,425 ವ್ಯಕ್ತಿಗಳ ಅಲ್ಲಿನ ಬ್ಯಾಂಕೊಂದಕ್ಕೆ ಅಂದಾಜು 700 ಕೋಟಿ ರೂ.ಗಳಷ್ಟು ನಷ್ಟವನ್ನುಂಟು ಮಾಡಿ, ಭಾರತವಲ್ಲದೆ ಬೇರೆ ಬೇರೆ ದೇಶಗಳಿಗೆ ಪಲಾಯನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಆ ಭಾರತೀಯರ ಮೂಲ ವಿಳಾಸ ಕೆದಕಿಕೊಂಡು ಕೇರಳಕ್ಕೆ ಆಗಮಿಸಿದ್ದ ಕುವೈತ್ ಬ್ಯಾಂಕ್ ಅಧಿಕಾರಿಗಳು ಕೇರಳದಲ್ಲಿ ಆ ವ್ಯಕ್ತಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ.
ಮೋಸದ ಆರೋಪ ಕೇಳಿಬಂದಿರುವ 1,425 ವ್ಯಕ್ತಿಗಳಲ್ಲಿ ಸುಮಾರು 700 ಮಂದಿ ಶುಶ್ರೂಷಕಿಯರಾಗಿದ್ದಾರೆ. ಇವರು ಕುವೈತ್ ಆರೋಗ್ಯ ಇಲಾಖೆಯ ಅಡಿಯಲ್ಲಿನ ನಾನಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ವೇತನದ ಆಧಾರದಲ್ಲಿ ಕುವೈತ್ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆ.
ಭಾರತದ ಕರೆನ್ಸಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಸುಮಾರು 90 ಲಕ್ಷ ರೂ.ಗಳಿಂದ 1ಕೋಟಿ 25 ಲಕ್ಷ ರೂ.ಗಳವರೆಗೆ ಸಾಲ ಪಡೆದಿದ್ದಾರೆ. ಸಾಲ ಪಡೆದ ಕೆಲವೇ ದಿನಗಳಲ್ಲಿ ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸಿದೆ ಅಮೆರಿಕ, ಯುನೈಟೆಡ್ ಕಿಂಗ್ ಡಮ್ ಹಾಗೂ ಕೆನಡಾ ಮತ್ತಿತರ ದೇಶಗಳ ಕಡೆ ವಲಸೆ ಹೋಗಿದ್ದಾರೆ.
ಬ್ಯಾಂಕುಗಳಿಗೆ ಹೀಗೆ ಮೋಸ ಮಾಡಿರುವವರ ಹೆಸರುಗಳನ್ನು ಪಟ್ಟಿ ಮಾಡಿ , ಕೆಲಸಕ್ಕೆ ಸೇರುವಾಗ ಅವರು ಕೊಟ್ಟಿದ್ದ ಖಾಯಂ ವಿಳಾಸಗಳನ್ನು ಪತ್ತೆ ಹಚ್ಚಿರುವ ಕುವೈತ್ ಬ್ಯಾಂಕ್ ಅಧಿಕಾರಿಗಳು ಆ ವಿಳಾಸಗಳನ್ನು ಹುಡುಕಿಕೊಂಡು ಬಂದು ಇಲ್ಲಿ ಅವರ ಮನೆಗಳ ಸದಸ್ಯರನ್ನು ಭೇಟಿ ಮಾಡಿ ವಿಚಾರಣೆ ನಡೆಸಿದ್ದಾರೆ. ಆನಂತರ ಕೇರಳದ ಎಜಿಡಿಪಿಯನ್ನು ಭೇಟಿ ಮಾಡಿ ಆಯಾ ಖಾಯಂ ವಿಳಾಸಗಳಿರುವ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಹೆಚ್ಚು ಕೇಸ್ ಗಳು ದಾಖಲಾಗಿರುವುದು ಎರ್ನಾಕುಲಂ ಹಾಗೂ ಕೊಟ್ಟಾಯಂನಲ್ಲಿ.
ದೂರು ದಾಖಲಿಸುವ ವೇಳೆ, ಬ್ಯಾಂಕಿನ ಅಧಿಕಾರಿಗಳು ಸಾಲ ಪಡೆದು ಮೋಸ ಮಾಡಿರುವ ಕೇರಳಿಗರ ಫೋಟೋಗಳು, ಅವರು ಕೆಲಸ ಮಾಡುತ್ತಿದ್ದ ಜಾಗ ಮತ್ತಿತರ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆ. ಭಾರತದಲ್ಲಿ ಬ್ಯಾಂಕುಗಳಿಗೆ ಮೋಸ ಮಾಡಿದರೆ ಸಿಆರ್ ಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಸೆಕ್ಷನ್ ಅಡಿಯಲ್ಲಿ ಏನೇನು ಶಿಕ್ಷೆಗಳಿವೆಯೋ ಅದೇ ರೀತಿಯ ಶಿಕ್ಷೆಗಳು ಕುವೈತ್ ನಲ್ಲಿ ಬ್ಯಾಂಕ್ ಗಳಿಗೆ ಮೋಸ ಮಾಡಿದವರಿಗೂ ಇದೆ.
Comments