top of page

ಕನ್ನಡ ಬರೆಯಲು ತಡಕಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ

  • Writer: Ananthamurthy m Hegde
    Ananthamurthy m Hegde
  • Feb 2
  • 1 min read

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿಯವರು ಅಂಗನವಾಡಿಯಲ್ಲಿನ ಬೋರ್ಡ್ ಮೇಲೆ ಕನ್ನಡ ಬರೆಯಲು ಹೋಗಿ ತಪ್ಪಾಗಿ ಬರೆದಿದ್ದಾರೆ. ಆನಂತರ, ಜೊತೆಯಲ್ಲಿದ್ದ ಅಧಿಕಾರಿಗಳು ಅವರ ಬರಹದಲ್ಲಿನ ತಪ್ಪುಗಳನ್ನು ಗಮನಿಸಿದಾಗ ಅವರು ಆ ತಪ್ಪನ್ನು ತಿದ್ದಲು ಗೊತ್ತಾಗದೇ ತಡಕಾಡಿದ್ದಾರೆ. ಈ ವಿಡಿಯೋ ಫೆ. 2ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ree

ಕಾರಟಗಿಯ ಅಂಗನವಾಡಿ ಶಾಲೆಯಲ್ಲಿನ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದ ಸಚಿವರು, ಕಾರ್ಯಕ್ರಮ ಮುಗಿಸಿಕೊಂಡು ವಿದ್ಯಾರ್ಥಿಗಳನ್ನು ತರಗತಿಯೊಂದಕ್ಕೆ ಹೋಗಿ ಅಲ್ಲಿ ವಿದ್ಯಾರ್ಥಿಗಳನ್ನು ಮಾತನಾಡಿಸಿದರು. ಆ ವೇಳೆ, ತರಗತಿಯಲ್ಲಿನ ಬೋರ್ಡ್ ಮೇಲೆ ‘ಕಾರಟಗಿ ಅಂಗನವಾಡಿ ಕೇಂದ್ರ’, JP ನಗರ, ಉದ್ಘಾಟನಾ ಸಮಾರಂಭ ಎಂದು ಬರೆಯಲಾಗಿತ್ತು. ಈ ಮೂರೂ ವಾಕ್ಯಗಳು ನಂತರ ನಾಲ್ಕನೇ ವಾಕ್ಯವಾಗಿ, ಶುಭವಾಗಲಿ ಎಂದು ಬರೆಯಲು ಸಚಿವರು ಮುಂದಾದರು.

ಕೈಯ್ಯಲ್ಲಿ ಚಾಕ್ ಪೀಸ್ ಹಿಡಿದು ಶುಭವಾಗಲಿ ಎಂದು ಬರೆಯಲು ಹೋದ ಸಚಿವರಿಗೆ ಅದನ್ನು ಸರಿಯಾಗಿ ಬರೆಯಲು ಆಗಲೇ ಇಲ್ಲ. ಮೊದಲು 'ಶ' ಅಕ್ಷರ ಬರೆದರು. ಆನಂತರ, 'ಬ' ಅಕ್ಷರ ಬರೆದರು. ಆಗ ಪಕ್ಕದಲ್ಲಿದ್ದವರೊಬ್ಬರು, 'ಶ' ಅಕ್ಷರಕ್ಕೆ ಕೊಂಬು ಕೊಡಬೇಕು ಎಂದಾಗ, ಸಚಿವರು 'ಶ' ಅಕ್ಷರಕ್ಕೆ ಕೊಂಬು ಗೀಚಿದರು. ಅತ್ತ 'ಬ' ಅಕ್ಷರಕ್ಕೂ ತಲೆಕಟ್ಟು ಹಾಕಬೇಕು ಹಾಗೂ 'ಬ' ಅಕ್ಷರಕ್ಕೆ ಕೆಳಗೆ ಬಾಲ ಬರೆಯಬೇಕು ಎಂದು ಪಕ್ಕದಲ್ದಿದ್ದವರು ಬಿಡಿಸಿ ಹೇಳಿದಾಗ ಸಚಿವರು ಅದನ್ನು ಪಾಲಿಸಿದರು.

ಆನಂತರ, ಶುಭ ಪದವನ್ನು ತಿದ್ದಿ ತೀಡಿ ಸರಿಯಾಗಿ ಬರೆದ ನಂತರ ಅದರ ಮುಂದೆ 'ವಾಗಲಿ' ಎಂದು ಸಚಿವರು ಸರಾಗವಾಗಿ ಬರೆದರು. ಆದರೆ, ಸ್ಟಾರ್ಟಿಂಗ್ ಟ್ರಬಲ್ ಎಂಬ ರೀತಿಯಲ್ಲಿ ಶುಭಾಶಯ ಎಂಬ ಪದದ ಮೊದಲೆರಡು ಅಕ್ಷರಗಳನ್ನು ಬರೆಯುವುವಾಗ ಸಚಿವರು ಗೊಂದಲಕ್ಕೊಳಲಾಗಿದ್ದು ಮಾತ್ರ ನಿಜ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ಕನ್ನಡ ಬರೆಯಲು ಬಾರದವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರನ್ನಾಗಿಸಿದ್ದಾದರೂ ಏಕೆ ಎಂದು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

ಮಧು ಬಂಗಾರಪ್ಪರಿಗೆ ಮುಜುಗರ

ಕೆಲವು ದಿನಗಳ ಹಿಂದೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸುವಾಗ ಅಲ್ಲಿನ ವಿದ್ಯಾರ್ಥಿಯು ಎದ್ದು ನಿಂತು, ಸರ್, ನಿಮಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಹೇಳಿದ್ದ. ಅದಕ್ಕೆ ಸಚಿವರು ಗರಂ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

 
 
 

Comments


Top Stories

bottom of page