ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ
- Ananthamurthy m Hegde
- 1 day ago
- 1 min read

ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯ ಬ್ರೀಫಿಂಗ್ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕೊನೆಗೂ ಕ್ಷಮೆ ಕೋರಿದ್ದಾರೆ.
ಮಧ್ಯಪ್ರದೇಶ ಬಿಜೆಪಿ ನಾಯಕ ಹಾಗೂ ಸಚಿವ ವಿಜಯ್ ಶಾ ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಮಧ್ಯಪ್ರದೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಬಿಜೆಪಿ ನಾಯಕ ವಿಜಯ್ ಶಾ, ಪ್ರಧಾನಿ ಮೋದಿ ಅವರನ್ನು ಹೊಗಳುವ ಭರದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು 'ಭಯೋತ್ಪಾದಕರ ಸಹೋದರಿ' ಎಂದು ಕರೆದಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಧ್ಯ ಪ್ರದೇಶ ಸಚಿವ ವಿಜಯ್ ಶಾ, ಸಹೋದರಿ ಸೋಫಿಯಾ ಖುರೇಷಿ ಬಗ್ಗೆ ನಾನು ಕನಸಿನಲ್ಲೂ ಆ ರೀತಿ ಭಾವಿಸಲು ಸಾಧ್ಯವಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸಿಸ್ಟರ್ ಸೋಫಿಯಾ ಜಾತಿ ಮತ್ತು ಧರ್ಮವನ್ನು ಮೀರಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅವರು ನಮ್ಮ ಸ್ವಂತ ಸಹೋದರಿಗಿಂತ ಹೆಚ್ಚು ಗೌರವಾನ್ವಿತರು. ಅವರು ರಾಷ್ಟ್ರಕ್ಕೆ ಮಾಡಿದ ಸೇವೆಗೆ ನಾನು ಅವರಿಗೆ ನಮಸ್ಕರಿಸುತ್ತೇನೆ. ನಮ್ಮ ಕನಸಿನಲ್ಲಿಯೂ ಅವರನ್ನು ಅವಮಾನಿಸುವ ಬಗ್ಗೆ ನಾವು ಯೋಚಿಸಲು ಸಹ ಸಾಧ್ಯವಿಲ್ಲ. ಆದರೂ, ನನ್ನ ಮಾತುಗಳು ಸಮಾಜ ಮತ್ತು ಧರ್ಮಕ್ಕೆ ನೋವುಂಟು ಮಾಡಿದ್ದರೆ, ನಾನು ಒಂದಲ್ಲ ಹತ್ತು ಬಾರಿ ಕ್ಷಮೆಯಾಚಿಸಲು ಸಿದ್ಧನಿದ್ದೇನೆ" ಎಂದು ಅವರು ಹೇಳಿದ್ದಾರೆ.
Comments