ಜಿನ್ನಾ ತರಹದ ಅತೃಪ್ತ ಆತ್ಮಗಳಿಂದ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ: ಯೋಗಿ ಆದಿತ್ಯನಾಥ್ ಆಕ್ರೋಶ
- Ananthamurthy m Hegde
- Dec 7, 2024
- 1 min read

ಹೊಸದಿಲ್ಲಿ: "ಮಹಮ್ಮದ್ ಆಲಿ ಜಿನ್ನಾಗೆ ಇದ್ದಂತಹ ವಿಭಜಕ ಮನಸ್ಥಿತಿಯ ಅತೃಪ್ತ ಆತ್ಮ ಹೊಂದಿರುವ ಜನರು ಬಾಂಗ್ಲಾದೇಶದಲ್ಲಿ ಇನ್ನೂ ಇರುವುದರಿಂದ ಹಿಂದೂಗಳ ಮೇಲೆ ದೌರ್ಜನ್ಯ ಎಸಗುವ ಪರಂಪರೆ ಮುಂದುವರಿದಿದೆ,'' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ಲಖನೌದಲ್ಲಿ ನಡೆದ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "1947ರಲ್ಲಿ ದೇಶ ವಿಭಜನೆ ಮಾಡಿದ ಅತೃಪ್ತ ಆತ್ಮದ ಕೊಳಕು ಮನಸಿನ ಪ್ರತಿರೂಪಗಳು ಬಾಂಗ್ಲಾದೇಶದಲ್ಲಿ ತಲೆ ಎತ್ತಿವೆ. ಹಿಂದೂಗಳ ಮೇಲೆ ದಾಳಿ ನಡೆಸುವ ಮೂಲಕ ತಮ್ಮ ಪೂರ್ವಜರ ದೌರ್ಜನ್ಯದ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾರೆ,'' ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಬಲವಂತದ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂ ಸೇರಿದಂತೆ ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರಕಾರದ ಮೂಗಿನಡಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅಸಹನೆ ಮುಂದುವರಿದಿದೆ.
ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ, ಸಮುದಾಯದ ಧಾರ್ಮಿಕ ಮುಖಂಡರ ಕಾನೂನು ಬಾಹಿರ ಬಂಧನದ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಡಿಸೆಂಬರ್ 9 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.
''ಢಾಕಾದಲ್ಲಿ ಉಭಯ ದೇಶಗಳ ವಿದೇಶಾಂಗ ಇಲಾಖೆ ಅಧಿಕಾರಿಗಳ ಜತೆ ನಡೆಯುವ ದ್ವಿಪಕ್ಷೀಯ ಮಾತುಕತೆಯಲ್ಲಿ ವಿಕ್ರಮ್ ಮಿಸ್ರಿ ಪಾಲ್ಗೊಳ್ಳಲಿದ್ದಾರೆ. ಭಾರತ-ಬಾಂಗ್ಲಾ ನಡುವಿನ ರಚನ್ಮಾಕ ಸಂಬಂಧ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ,'' ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.















Comments