ಜನವರಿ ೧೩ ರಿಂದ ಮಹಾಕುಂಭ ಮೇಳ : ಭರದಿಂದ ನಡೆಯುತ್ತಿರುವ ಸಿದ್ಧತೆ
- Ananthamurthy m Hegde
- Dec 10, 2024
- 1 min read

ಲಖನೌ : ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ, ಉತ್ತರ ಪ್ರದೇಶದ ಪ್ರಯಾಗರಾಜ್ (ಅಲಹಾಬಾದ್) ನಲ್ಲಿ ಮುಂದಿನ ವರ್ಷದ ಜನವರಿ 13ರಂದು ಆರಂಭವಾಗಲಿದೆ. 45 ದಿನಗಳ ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಸುಮಾರು 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ನಡೆಯುವ ಈ ಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ಆಯೋಜಿಸಲು ಉತ್ತರ ಪ್ರದೇಶ ಸರ್ಕಾರ ಠೊಂಕ ಕಟ್ಟಿ ನಿಂತಿದೆ. ಹನ್ನೆರಡು ವರ್ಷಕ್ಕೊಮ್ಮೆ, ಹರಿದ್ವಾರ ( ಗಂಗಾ ನದಿ ), ಉಜ್ಜೈನಿ ( ಶಿಪ್ರಾ ನದಿ ), ನಾಶಿಕ್ (ಗೋದಾವರಿ ನದಿ) ಮತ್ತು ಪ್ರಯಾಗರಾಜ್ ನಲ್ಲಿ ಮಹಾಕುಂಭ ಮೇಳ ನಡೆಯುತ್ತದೆ.
ವಿಶ್ವದ ವಿವಿಧ ಭಾಗಗಳಿಂದ ಸಂತರು, ನಾಗಸಾಧುಗಳು ಸೇರಿದಂತೆ, ಕೋಟ್ಯಾಂತರ ಜನರು ಈ 45 ದಿನಗಳ ಧಾರ್ಮಿಕ ಕಾರ್ಯಕ್ರಮದ ವಿವಿಧ ದಿನಗಳಂದು ಬಂದು ಪುಣ್ಯಸ್ನಾನ ಮಾಡುತ್ತಾರೆ. ಮೊದಲ ಪುಣ್ಯಸ್ನಾನ, ಜನವರಿ 13ರಂದು, ಪುಶ್ ಪೂರ್ಣಿಮಾ ಸ್ನಾನದ ಮೂಲಕ ಆರಂಭಗೊಳ್ಳುತ್ತದೆ.
ತ್ರಿವೇಣಿ ಸಂಗಮಕ್ಕೆ ಆಗಮಿಸುವ ಭಕ್ತಾದಿಗಳು ಪುಣ್ಯಸ್ನಾನ ಮಾಡುವ ಮೂಲಕ, 45 ದಿನಗಳ ಬೃಹತ್ ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ರಾಕ್ಷಕರ ಮೇಲೆ ದೇವರ ವಿಜಯ ಎನ್ನುವ ಸಂಕೇತಕ್ಕಾಗಿ 12 ವರ್ಷಕ್ಕೊಮ್ಮೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎನ್ನುವುದು ಪ್ರತೀತಿ.
ಭಾರತದ ಶ್ರೀಮಂತ ಸಂಪ್ರದಾಯ, ಕಲೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸುವ ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿ, 2,500 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಕುಂಭಮೇಳಕ್ಕೆ ಜಾಗವನ್ನು ಹಸ್ತಾಂತರಿಸುವ ಮೂಲಕ, ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಅಮೆರಿಕಾ, ಇಸ್ರೇಲ್, ಫ್ರಾನ್ಸ್ ಮುಂತಾದ ದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಶುಚಿತ್ವ, ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದ್ದು, ಪ್ರತೀ 10 ಶೌಚಾಲಯಕ್ಕೆ ಒಬ್ಬರು ಕ್ಲೀನರ್ ಅನ್ನು ನೇಮಿಸಲಾಗಿದೆ.
ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಅಗ್ನಿಶಾಮಕ ದಳದ ಹಲವು ತುಕುಡಿಗಳನ್ನು ನಿಯೋಜಿಸಲಾಗುವುದು ಎಂದು ಉತ್ತರ ಪ್ರದೇಶದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ. ಸಮ್ಮೇಳನ ಮುಗಿಯುವವರೆಗೂ, ನದಿಯ ಸ್ವಚ್ಛತೆ ಕಾಪಾಡಲು 500 ಜನರ ವಿಶೇಷ ತಂಡವನ್ನೂ ರಚಿಸಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ. ಮಹಾಕುಂಭ ಮೇಳದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ
ಮಹಾಕುಂಭ ಮೇಳದ ಪ್ರಮುಖ ದಿನಾಂಕಗಳು :
ಜನವರಿ 13 : ಪುಶ್ ಪೂರ್ಣಿಮಾ ಸ್ನಾನ, ಮಹಾಕುಂಭ ಮೇಳ ಆರಂಭ
ಜನವರಿ 14 : ಮಕರ ಸಂಕ್ರಾಂತಿ ಪುಣ್ಯಸ್ನಾನ
ಜನವರಿ 29 : ಮೌನಿ ಅಮಾವಾಸ್ಯ ಪುಣ್ಯಸ್ನಾನ, ಪಿಂಡ ಪ್ರಧಾನ
ಫೆಬ್ರವರಿ 12 : ಮಾಘ ಪೂರ್ಣಿಮಾ ಪುಣ್ಯಸ್ನಾನ
ಫೆಬ್ರವರಿ 26 : ಮಹಾ ಶಿವರಾತ್ರಿ ಪುಣ್ಯಸ್ನಾನ















Comments