ಟಿಡಿಬಿ ದೇವಸ್ಥಾನಗಳ 535 ಕೆಜಿ ಚಿನ್ನದ ಹೂಡಿಕೆಗೆ ಸಿದ್ಧತೆ!
- Ananthamurthy m Hegde
- Dec 22, 2024
- 1 min read

ಬೆಂಗಳೂರು: ಶಬರಿಮಲೆ ಸಹಿತ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧೀನದಲ್ಲಿರುವ ದೇವಾಲಯಗಳಲ್ಲಿ ಉತ್ಸವ ಮತ್ತು ನಿತ್ಯ ಪೂಜೆ ಹೊರತುಪಡಿಸಿ, ದೇಗುಲದ ಉದ್ದೇಶಕ್ಕೆ ಬಳಸಲಾಗದ 535 ಕೆ.ಜಿ ಚಿನ್ನವನ್ನು ಜನವರಿ ಕೊನೆಯಲ್ಲಿ ಎಸ್‌ಬಿಐಯಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಕೇರಳದಲ್ಲಿ ಟಿಡಿಬಿಯಡಿ 1,252 ದೇವಾಲಯಗಳಿವೆ. ಈ ದೇವಾಲಯಗಳಿಗೆ ಕಾಣಿಕೆಯಾಗಿ ಲಭಿಸುವ ಚಿನ್ನವನ್ನು ಹೂಡಿಕೆಯಾಗಿ ಪರಿವರ್ತಿಸಲು ಹೈಕೋರ್ಟ್‌ನ ದೇವಸ್ವಂ ಮಂಡಳಿ ವರ್ಷದ ಹಿಂದೆ ಅನುಮತಿ ನೀಡಿದೆ. ಶಬರಿಮಲೆ ಹೊರತುಪಡಿಸಿ ಉಳಿದ ದೇವಾಲಯಗಳಲ್ಲಿ ಕಳೆದ 8 ತಿಂಗಳಿನಿಂದ ನಡೆಯುತ್ತಿರುವ ಪರಿಶೀಲನೆ ಹಾಗೂ ಲೆಕ್ಕಾಚಾರ ಪೂರ್ಣಗೊಂಡಿದೆ. ಈ ಚಿನ್ನವನ್ನು 21 ಸ್ಟ್ರಾಂಗ್ ರೂಂಗಳಲ್ಲಿ ಭದ್ರವಾಗಿ ಇರಿಸಲಾಗಿದೆ.
ಶಬರಿಮಲೆಯಲ್ಲಿ ಮಂಡಲ ಕಾಲಕ್ಕೂ ಮುನ್ನ 227.824 ಕೆ.ಜಿ ಚಿನ್ನ ಸಂಗ್ರಹವಾಗಿದೆ. ನವೆಂಬರ್ ಬಳಿಕ ಲೆಕ್ಕಾಚಾರ ಮಾಡಲಾಗಿಲ್ಲ. ಮಂಡಲ ಮಕರ ಜ್ಯೋತಿ ಬಳಿಕ ಜನವರಿ ಮಧ್ಯದಲ್ಲಿ ತಿರುವಾಭರಣಂ ಆಯುಕ್ತರು ಮತ್ತು ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಹಿರಿಯ ಅಧಿಕಾರಿಗಳು ಚಿನ್ನದ ಪರಿಶೀಲನೆ ನಡೆಸಿ ನಿಖರ ಲೆಕ್ಕಾಚಾರ ಮಾಡಲಿದ್ದಾರೆ.
ಟಿಡಿಬಿ ದೇವಾಲಯಗಳಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಸುಮಾರು 370 ಕೋಟಿ ರೂ. ಮೌಲ್ಯದ ಚಿನ್ನವಿದೆ. ಚಿನ್ನದ ಹೂಡಿಕೆಯಿಂದ ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಜಾರಿಗೆ ತಂದ ಚಿನ್ನದ ಠೇವಣಿ ಯೋಜನೆಯ ಲಾಭ ಪಡೆಯಬಹುದು. ಬೆಳ್ಳಿ ಆಭರಣಗಳನ್ನು ಹೂಡಿಕೆ ಯೋಜನೆಯಲ್ಲಿ ನಿಕ್ಷೇಪಿಸಲಾಗುವುದು. ಟಿಡಿಬಿಯ ಲೆಕ್ಕ ಪರಿಶೋಧನಾ ವಿಭಾಗ ಮತ್ತು ಎಸ್‌ಬಿಐ ಚಿನ್ನದ ಪ್ರಮಾಣವನ್ನು ಖಚಿತಪಡಿಸಲಿದೆ ಎಂದು ಎಂದು ಟಿಡಿಬಿ ಮಾಹಿತಿ ಹಕ್ಕು ಅಧಿಕಾರಿ ಎಂ ಕೆ ಹರಿದಾಸ್ ಹೇಳಿದ್ದಾರೆ.
ಶಬರಿಮಲೆ ಲೆಕ್ಕಾಚಾರ ಕೊನೆಯಲ್ಲಿ 66,875 ಪವನ್ ಚಿನ್ನ ಎಸ್‌ಬಿಐಗೆ ಹಸ್ತಾಂತರಿಸಲಾಗುವುದು. ಚಿನ್ನದ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಶೇ 2.25 ಬಡ್ಡಿ ಪಡೆಯಬಹುದು. ಈ ಚಿನ್ನದಿಂದ ಸುಮಾರು 10 ಕೋಟಿ ರೂ. ವಾರ್ಷಿಕ ಬಡ್ಡಿ ನಿರೀಕ್ಷಿಸಲಾಗಿದೆ. ಚಿನ್ನದ ಹೂಡಿಕೆಯಿಂದ ಲಭಿಸುವ ಬಡ್ಡಿ ಟಿಡಿಬಿಯ ಪ್ರತ್ಯೇಕ ಖಾತೆಗೆ ಜಮೆ ಆಗಲಿದೆ ಎಂದು ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಮುರಾರಿ ಬಾಬು ಮಾಹಿತಿ ನೀಡಿದ್ದಾರೆ.















Comments