top of page

ಟೀಮ್ ಇಂಡಿಯಾ ಸೋಲಿಸಲು ಗಮನ ಹರಿಸಿ : ಪಾಕ್ ಪ್ರಧಾನಿ ಸಲಹೆ

  • Writer: Ananthamurthy m Hegde
    Ananthamurthy m Hegde
  • Feb 9
  • 2 min read

ಲಾಹೋರ್: "ಪಾಕಿಸ್ತಾನ ತಂಡವು ಕೇವಲ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ನ್ನು ಗೆಲ್ಲುವ ಗುರಿ ಇಟ್ಟುಕೊಳ್ಳದೇ, ಫೆ.23ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸುವ ನೈಜ ಕರ್ತವ್ಯದತ್ತ ಗಮನಹರಿಸಬೇಕು.." ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌ ಪಾಕ್‌ ತಂಡಕ್ಕೆ ಕರೆ ನೀಡಿದ್ದಾರೆ.

ಲಾಹೋರ್‌ನ ನೂತನ ಗಡಾಫಿ ಸ್ಟೇಡಿಯಂ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್‌ ಷರೀಫ್‌, "ಪಾಕ್‌ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ನ್ನು ಗೆಲ್ಲುವ ಗುರಿಯ ಜೊತೆಗೆ, ಫೆ.23ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸುವ ತನ್ನ ನೈಜ ಕರ್ತವ್ಯದ ಬಗ್ಗೆಯೂ ಯೋಚಿಸಬೇಕು.." ಎಂದು ಆಗ್ರಹಿಸಿದರು.


ree

"ಭಾರತ ತಂಡದ ವಿರುದ್ಧ ನಮ್ಮ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಬೇಕು. ನಮ್ಮ ಸಾಂಪ್ರದಾಯಿಕ ಎದುರಾಳಿಯನ್ನು ಐಸಿಸಿ ಪಂದ್ಯಾವಳಿಯಲ್ಲಿ ಸೋಲಿಸುವುದು ನಮಗೆ ಮುಖ್ಯವಾಗಬೇಕು. ಈ ಕರ್ತವ್ಯ ನಿರ್ವಹಣೆಯಲ್ಲಿ ಇಡೀ ರಾಷ್ಟ್ರವೇ ನಿಮ್ಮ ಬೆನ್ನಿಗೆ ನಿಂತಿದೆ.." ಎಂದು ಶೆಹಬಾಜ್‌ ಷರೀಫ್‌ ಅವರು ಪಾಕ್‌ ತಂಡದ ಆಟಗಾರರನ್ನು ಹುರಿದುಂಬಿಸಿದರು.

"ನಾವು ಉತ್ತಮ ತಂಡವನ್ನು ಹೊಂದಿದ್ದೇವೆ. ಹಾಗೆಯೇ ಭಾರತ ಕೂಡ ಬಲಿಷ್ಠ ತಂಡದೊಂದಿಗೆ ಚಾಂಪಿಯನ್ಸ್‌ ಟ್ರೋಫಿ ಆಡಲಿದೆ. ಆದರೆ ಈ ಬಾರಿ ಪಾಕ್‌ ತಂಡವು ಭಾರತ ತಂಡವನ್ನು ಮಣಿಸಲಿದೆ ಎಂಬ ವಿಶ್ವಾಸ ನನಗಿದೆ.." ಎಂದು ಪಾಕ್‌ ಪ್ರಧಾನಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

"ಸುಮಾರು 29 ವರ್ಷಗಳ ನಂತರ ಪಾಕಿಸ್ತಾನವು ಐಸಿಸಿ ಈವೆಂಟ್‌ನ್ನು ಆಯೋಜಿಸುತ್ತಿರುವುದು ನನಗೆ ವೈಯಕ್ತಿಕವಾಗಿ ಸಂತಸ ತಂದಿದೆ. ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿರುವ ವಿನೂತನ ಗಡಾಫಿ ಕ್ರೀಡಾಂಗಣ, ಪಾಕಿಸ್ತಾನದ ಕ್ರಿಕೆಟ್ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ತಂಡವು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.." ಎಂದು ಶೆಹಬಾಜ್ ಷರೀಫ್ ಹೇಳಿದರು.

ಕ್ರೀಡಾ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಸಾಂಪ್ರದಾಯಿಕ ಎದುರಾಳಿ ಎಂದೇ ಪರಿಗಣಿಸಲಾಗುತ್ತದೆ. ಅದರಲ್ಲೂ ಕ್ರಿಕೆಟ್‌ ಆಟಕ್ಕೆ ಬಂದರೆ ಊಭಯ ದೇಶಗಳ ನಡುವಿನ ಪಂದ್ಯವನ್ನು ಗಡಿಯಲ್ಲಿ ನಡೆಯುತ್ತಿರುವ ಸೇನಾ ಕದನದಂತೆ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚಾಮಪಿಯನ್ಸ್‌ ಟ್ರೋಫಿ ಗೆಲ್ಲುವುದರ ಜೊತೆಗೆ, ಭಾರತ ತಂಡವನ್ನೂ ಸೋಲಿಸುವತ್ತ ಹೆಚ್ಚಿನ ಗಮನ ಹರಿಸುವಂತೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು, ಪಾಕ್‌ ಕ್ರಿಕೆಟ್‌ ತಂಡದ ಆಟಗಾರರಿಗೆ ಸಲಹೆ ನಿಡಿದ್ದಾರೆ.

2021ರಲ್ಲಿ ದುಬೈನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವು ಭಾರತ ತಂಡವನ್ನು ಕೊನೆಯ ಬಾರಿಗೆ ಸೋಲಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ನಡೆದ ಯಾವುದೇ ಐಸಿಸಿ ಈವೆಂಟ್‌ನಲ್ಲೂ ಪಾಕಿಸ್ತಾನವು ಭಾರತದ ವಿರುದ್ಧ ಜಯ ಸಾಧಿಸಿಲ್ಲ.

ಪ್ರಸ್ತುತ ಭಾರತವು ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ಕ್ಕಾಗಿ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿದೆ. ಅದರಂತೆ ಫೆಬ್ರವರಿ 23ರಂದು ಭಾರತ-ಪಾಕಿಸ್ತಾನ ನಡುವೆ ದುಬೈನಲ್ಲಿ ಪಂದ್ಯ ನಡೆಯಲಿದೆ.

ಪಾಕಿಸ್ತಾನವು ಹಾಲಿ ಚಾಂಪಿಯನ್ ಆಗಿ ಈ ಬಾರಿಯ ಚಾಂಪಿಯನ್ಸ್‌ ಟೂರ್ನಿಯನ್ನು ಪ್ರವೇಶಿಸಿದೆ. 2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯನ್ನು ಪಾಕಿಸ್ತಾನ ಗೆದ್ದುಕೊಂಡಿತ್ತು.

 
 
 

Comments


Top Stories

bottom of page