top of page

ಡಿಕೆಶಿ ತರಾಟೆಗೆ ತೆಗೆದುಕೊಂಡ ಖರ್ಗೆ : ಶಕ್ತಿ ಯೋಜನೆ ಪರಿಷ್ಕರಣೆ ಹೇಳಿಕೆಗೆ ಅಸಮಾಧಾನ

  • Writer: Ananthamurthy m Hegde
    Ananthamurthy m Hegde
  • Nov 1, 2024
  • 1 min read




ree

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆಯನ್ನು ಪರಿಶೀಲಿಸುತ್ತೇವೆ ಎಂದು ಹೇಳಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ತರಾಟೆಗೆ ತೆಗೆದುಕೊಂಡರು.

ಆರ್ಥಿಕವಾಗಿ ಸದೃಢವಾಗಿರುವವರು, ಐಟಿಬಿಟಿ ಸಂಸ್ಥೆಯವರು, ಎಂಎನ್‌ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.

ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಡಿಸಿಎಂ ಹೇಳಿಕೆ ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗಿದೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಏನಪ್ಪಾ… ಗ್ಯಾರಂಟಿಯ ಬಗ್ಗೆ ಏನೋ ಹೇಳಿದ್ದೀಯಲ್ಲ… ಎಂದು ಡಿಕೆಶಿ ಕಡೆಗೆ ತಿರುಗಿ ಪ್ರಶ್ನಿಸಿದರು. ಇದಕ್ಕೆ ಡಿ.ಕೆ. ಶಿವಕುಮಾರ್, ನಾನು ಏನೂ ಹೇಳಿಲ್ಲ ಎಂದು ಕೈಸನ್ನೆ ಮಾಡಿದರು. ನೀನು ಪೇಪರ್ ನೋಡಿಲ್ಲಪ್ಪ, ನಾನು ನೋಡುತ್ತೇನೆ. ಪೇಪರ್‌ನಲ್ಲಿ ನೀನು ಹೇಳಿದ್ದೀಯಾ ಎಂದು ಬಂದಿದೆ ಎಂದರು.

ಇವತ್ತಿನ ಪತ್ರಿಕೆಗಳಲ್ಲಿ ನಿನ್ನದೇ ಹೆಸರು ಬಂದಿದೆ. ಯಾವುದೋ ಗ್ಯಾರಂಟಿಯ ಬಗ್ಗೆ ಏನೋ ಹೇಳಿದ್ದೀಯ ಅಂತ ಹಾಸ್ಯಮಯವಾಗಿ ಪ್ರಶ್ನಿಸಿದರು.

ಒಂದಷ್ಟು ಗ್ಯಾರಂಟಿ ಕೊಟ್ಟಿದ್ದೀವಿ. ಇದನ್ನು ನೋಡಿದ ಮೇಲೆ ನಾನು ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ ಐದು ಗ್ಯಾರಂಟಿ ಕೊಟ್ಟಿದ್ದೀವಿ ಅಂತ ಹೇಳಿದ್ದೆ. ಈಗ ನೀವು(ಶಿವಕುಮಾರ್) ಒಂದು ಗ್ಯಾರಂಟಿ ಬಿಡಿ ಎಂದು ಹೇಳಿದ್ದೀರಿ ಎಂದು ಖರ್ಗೆ ವ್ಯಂಗ್ಯವಾಡಿದರು.

ಕೂಡಲೇ ಪಕ್ಕದಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.



Comments


Top Stories

bottom of page