ಡಿ.೧೪ ರಂದು ರೈತರಿಂದ ದಿಲ್ಲಿ ಚಲೋ ಪುನರಾರಂಭ
- Ananthamurthy m Hegde
- Dec 11, 2024
- 1 min read

ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 14 ರಂದು 'ದಿಲ್ಲಿ ಚಲೋ' ಪುನರಾರಂಭಿಸಲಿದ್ದಾರೆ ಎಂದು ಪಂಜಾಬ್ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಅವರು ಮಂಗಳವಾರ ಹೇಳಿದ್ದಾರೆ.
ಸರ್ಕಾರದ ಕಡೆಯಿಂದ ಮಾತುಕತೆಗೆ ಯಾವುದೇ ಸಂದೇಶ ಬಂದಿಲ್ಲವಾದ್ದರಿಂದ ಪ್ರತಿಭಟನಾ ನಿರತ ರೈತರು ಡಿಸೆಂಬರ್ 14 ರಂದು ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಲಿದ್ದಾರೆ ಎಂದು ಪಂಧೇರ್ ತಿಳಿಸಿದ್ದಾರೆ.
ಶಂಭು ಗಡಿ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಂಧೇರ್, "ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಯಸುವುದಿಲ್ಲ ಎಂದು ದೂರುವುದು ಸರಿಯಲ್ಲ. ನಾವು ಸಮಯ ನೀಡಿದ್ದೇವೆ ಆದರೆ ಮಾತುಕತೆಗಾಗಿ ಸರ್ಕಾರ(ಕೇಂದ್ರ)ದ ಕಡೆಯಿಂದ ಯಾವುದೇ ಸಂದೇಶ ಬಂದಿಲ್ಲ" ಎಂದರು.
"ಈಗ, ಎರಡೂ ವೇದಿಕೆಗಳು ತೆಗೆದುಕೊಂಡ ನಿರ್ಧಾರದಂತೆ 101 ರೈತರ ನಮ್ಮ ಮುಂದಿನ ಜಾಥಾ ಶಂಭು ಗಡಿಯಿಂದ ಡಿಸೆಂಬರ್ 14 ರಂದು ದೆಹಲಿಗೆ ಹೊರಡಲಿದೆ" ಎಂದು ಅವರು ಹೇಳಿದರು.
ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಹಾರಿಸಿದ ಅಶ್ರುವಾಯು ಶೆಲ್‌ಗಳಿಂದ ಕೆಲವರು ಗಾಯಗೊಂಡ ನಂತರ ಪ್ರತಿಭಟನಾನಿರತ ರೈತರು ಶುಕ್ರವಾರ ರಾಷ್ಟ್ರ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದರು.















Comments