top of page

ಡಿ . ೨೯ಕ್ಕೆ ಬೆಂಗಳೂರಿಗೆ ಜೆ.ಪಿ ನಡ್ಡಾ : ಬಿಜೆಪಿ ಬಣ ಸಮಸ್ಯೆ ಚರ್ಚೆ ಸಾಧ್ಯತೆ

  • Writer: Ananthamurthy m Hegde
    Ananthamurthy m Hegde
  • Dec 23, 2024
  • 2 min read

ಬೆಂಗಳೂರು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಮಧ್ಯೆಯೇ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ದೆಹಲಿಗೆ ಹೋಗಿ ಬಂದಿದ್ದರು. ಅಲ್ಲಿ, ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ಸುಮಾರು 20 ನಿಮಿಷ ಮಾತುಕತೆಯನ್ನು ನಡೆಸಿದ್ದರು. ಈ ಭೇಟಿಯ ನಂತರ, ವಿಜಯೇಂದ್ರ ಮುಖ ಖುಷಿಯಿಂದ ಅರಳಿತ್ತು.

 ಇದಕ್ಕೆ ಕಾರಣ ಇಲ್ಲದಿಲ್ಲ, ಶಿಸ್ತು ಸಮಿತಿಯ ಎಚ್ಚರಿಕೆ, ಶೋಕಾಸ್ ನೋಟಿಸ್ ನಂತರವೂ ಬಸನಗೌಡ ಪಾಟೀಲ್ ಯತ್ನಾಳ್ ತಂಡದ ಅಪಸ್ವರ ನಿಂತಿರಲಿಲ್ಲ. ಯಡಿಯೂರಪ್ಪ ಕುಟುಂಬದ ವಿರುದ್ದದ ಟೀಕೆ, ಆರೋಪ ಮುಂದುವರಿದಿತ್ತು. ಹೀಗಾಗಿ, ವಿಜಯೇಂದ್ರ ಅವರ ದೆಹಲಿ ಮಹತ್ವವನ್ನು ಪಡೆದುಕೊಂಡಿತ್ತು.

ವಕ್ಫ್ ಮತ್ತು ಇತರ ವಿಚಾರಕ್ಕೆ ಸಂಬಂಧಿಸಿದಂತೆ, ಅಧಿವೇಶನದಲ್ಲಿ ಹಸಿಬಿಸಿ ಚರ್ಚೆಯು ನಡೆಯುತ್ತಿದ್ದಾಗಲೇ ವಿಜಯೇಂದ್ರ, ದೆಹಲಿಗೆ ಭೇಟಿ ನೀಡಿದ್ದು ಕುತೂಹಲಕ್ಕೂ ಕಾರಣವಾಗಿತ್ತು. ಮೋದಿ ಭೇಟಿಯ ನಂತರ ಮಾತನಾಡಿದ ವಿಜಯೇಂದ್ರ, ರಾಜ್ಯದ ಇನ್ನೊಂದು ಗುಂಪಿನ ಚಟುವಟಿಕೆಯ ಬಗ್ಗೆಯೂ ಪ್ರಧಾನಿಗಳಿಗೆ ವಿವರಿಸಿದ್ದೇನೆ ಎಂದು ಹೇಳಿದ್ದರು.

ಪ್ರಧಾನಿ ಜೊತೆಗಿನ ಮಾತುಕತೆಯ ವೇಳೆ, ರಾಜ್ಯದಲ್ಲಿ ಸದಸ್ಯತ್ವ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು, ಪಕ್ಷ ಬಲವರ್ಧನೆಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿಜಯೇಂದ್ರ ವಿವರಿಸಿದ್ದಾರೆ ಎಂದು ಸುದ್ದಿಯಾಗಿದೆ. ಜೊತೆಗೆ, ಪಕ್ಷವನ್ನು ಸಂಘಟಿಸುತ್ತಿರುವ ರೀತಿಗೂ ಪ್ರಧಾನಿ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯೇಂದ್ರ ಅವರ ಜೊತೆಗಿನ ಮಾತುಕತೆಗೆ ಮುನ್ನವೇ, ಕರ್ನಾಟಕದ ಬಿಜೆಪಿಯ ಸ್ಥಿತಿಗತಿಯ ವಿವರಣೆಯನ್ನು, ರಾಷ್ಟ್ರಾಧ್ಯಕ್ಷ ನಡ್ಡಾ ಅವರಿಂದ ಮೋದಿ ಪಡೆದುಕೊಂಡಿದ್ದರು. ಆ ವರದಿಯ ಪ್ರಕಾರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ, ವಿಜಯೇಂದ್ರ ಪಕ್ಷವನ್ನು ಸಂಘಟಿಸುತ್ತಿರುವ ರೀತಿಗೆ ಪ್ರಶಂಸೆ ವ್ಯಕ್ತವಾಗಿದೆ ಎನ್ನುವ ಮಾಹಿತಿಯಿದೆ.

ರಾಜ್ಯ ಬಿಜೆಪಿಯಲ್ಲಿ ಒಂದು ಬಣದ ಬಹಿರಂಗ ಹೇಳಿಕೆಯ ಬಗ್ಗೆ ಮಾಹಿತಿಯಿದೆ, ನೀವು ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತನ್ನು ನೀಡಿ. ನಡ್ಡಾ ಅವರು ಬೆಂಗಳೂರಿಗೆ ಬರುವವರಿದ್ದಾರೆ, ಆ ವೇಳೆ ಈ ಎಲ್ಲಾ ಗೊಂದಲಗಳಿಗೆ ತೆರೆಯನ್ನು ಎಳೆಯಲಾಗುವುದು. ನಿಮ್ಮ ಕಾರ್ಯವೈಖರಿ ಸರಿಯಾಗಿದೆ ಎಂದು ಮೋದಿ, ವಿಜಯೇಂದ್ರ ಅವರ ಬೆನ್ನುತಟ್ಟಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗಾಗಿ, ದೆಹಲಿಯಲ್ಲಿ ಸಿಕ್ಕ ನೈತಿಕ ಬಲ ವಿಜಯೇಂದ್ರ ಮತ್ತು ಅವರ ತಂಡಕ್ಕೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ. ವಿಜಯೇಂದ್ರ ಅವರನ್ನು ಬೆಂಬಲಿಸಿ, ದೆಹಲಿಗೆ ನಿಯೋಗವೊಂದನ್ನು ಕರೆದುಕೊಂಡುವ ಹೋಗುವ ನಿರ್ಧಾರಕ್ಕೆ ಬರಲಾಗಿತ್ತು. ವಿಜಯೇಂದ್ರ ಪರವಾಗಿ ಪ್ರತ್ಯೇಕ ಸಭೆಯೂ ನಡೆದಿತ್ತು. ಇದೆಲ್ಲಾ ನಡೆಯಕೂಡದು ಎಂದು ವಿಜಯೇಂದ್ರ ಎಚ್ಚರಿಕೆಯನ್ನೂ ನೀಡಿದ್ದರು.

ಇದೇ ಡಿ.29ರಂದು ನಡ್ಡಾ ಅವರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಭೇಟಿಯ ಪೂರ್ಣ ಪಟ್ಟಿ ಲಭ್ಯವಾಗಿಲ್ಲ, ಆದರೂ, ಬಣ ರಾಜಕೀಯಕ್ಕೆ ಮದ್ದನ್ನು ಅರೆಯಲು ಅವರು ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯತ್ನಾಳ್ ಮತ್ತು ತಂಡವನ್ನು ಕರೆಸಿ, ಎಚ್ಚರಿಕೆಯನ್ನು ಅಥವಾ ಅವರ ದೂರನ್ನು ಆಲಿಸಬಹುದು. ಸದ್ಯದ ಮಟ್ಟಿಗೆ, ವಿಜಯೇಂದ್ರ ಅವರ ಮೇಲೆ, ಹೈಕಮಾಂಡ್ ಸಂಪೂರ್ಣ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ.

" ಪ್ರಧಾನಿ ಮೋದಿಯವರ ಆಶೀರ್ವಾದದ ಮಾರ್ಗದರ್ಶನ ರಾಜ್ಯದಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ಅದಮ್ಯ ಉತ್ಸಾಹ ತುಂಬಿದೆ, ಇಂದಿನ ಅವರ ಭೇಟಿಯ ಸಂದರ್ಭದ ಮಾತುಗಳು ಸಂಘಟನೆಯ ಬಲವೃದ್ಧಿಯ ಜೊತೆ ಜೊತೆಗೇ ರಾಷ್ಟ್ರ ಬಲಿಷ್ಠಗೊಳಿಸುವ ಮಹಾ ಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಪ್ರೇರಣೆ ನೀಡಿತು" ಎಂದು ವಿಜಯೇಂದ್ರ, ತಮ್ಮ ಎಕ್ಸ್ ಅಕೌಂಟಿನಲ್ಲಿ ಬರೆದುಕೊಂಡಿದ್ದರು.

Comments


Top Stories

bottom of page