top of page

ತ್ವರಿತಗತಿಯಲ್ಲಿ ಹಾಸನ ವಿಮಾನ ನಿಲ್ದಾಣ ಪೂರ್ಣಗೊಳಿಸಲು ದೇವೇಗೌಡ ಮನವಿ

  • Writer: Ananthamurthy m Hegde
    Ananthamurthy m Hegde
  • Dec 6, 2024
  • 1 min read

ree

ಹೊಸದಿಲ್ಲಿ : ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಬಲವರ್ಧನೆಗೆ ಸಹಕಾರಿಯಾಗುವ ಹಾಗೂ ರೈತರಿಗೆ ಅತಿ ಹೆಚ್ಚು ಉಪಯುಕ್ತವಾಗುವ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಈ ಬಗ್ಗೆ ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಇದು ಅತ್ಯಂತ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣವಾಗಿದ್ದು, ಕ್ಷಿಪ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಜನತೆಗೆ ಹೆಚ್ಚು ಅನುಕೂಲ ಆಗುತ್ತದೆ. ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ ಎಂಬುದನ್ನು ಒತ್ತಿ ಹೇಳಿದರು.ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವುದರಿಂದ ಇತಿಹಾಸ ಪ್ರಸಿದ್ಧ ಬೇಲೂರು-ಹಳೇಬೀಡು- ಶ್ರವಣಬೆಳಗೋಳ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದರ ಜತೆಗೆ ಜಿಲ್ಲೆಯ ರೈತರಿಗೆ ಕೃಷಿ ರಫ್ತು ಹೆಚ್ಚಿಸುವಲ್ಲಿ ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಆಗಿರುವ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಬರುತ್ತಾರೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎಂದು ಹೇಳಿದರು.ಇನ್ನು, ಇದೇ ವೇಳೆ ರಾಜ್ಯಸಭೆಯ ಸಭಾಪತಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿಗಳು, ಭಾವುಕರಾದರು. ಸರ್, ನೀವು ರೈತರ ಬಗ್ಗೆ ತುಂಬಾ ಕಾಳಜಿ, ಬದ್ಧತೆಯಿಂದ ಮಾತನಾಡುತ್ತೀರಿ. ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಳು ಬಾರಿ ಆಯ್ಕೆಯಾಗಿರುವ ರೈತ ನಾನು. ನನ್ನ ಜೀವನದ 66 ವರ್ಷಗಳನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದೇನೆ. ಹಾಸನ ವಿಮಾನ ನಿಲ್ದಾಣ ಪೂರ್ಣಗೊಳಿಸಬೇಕು. ಇದು ರೈತರನ್ನು ಉನ್ನತಿಗೆ ತರುತ್ತದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇದು ಕೇವಲ ಬೇಡಿಕೆಯಲ್ಲ; ಇದು ಈ ಸಂದರ್ಭದ ತುರ್ತು ಅಗತ್ಯವಾಗಿದೆ ಎಂದು ಕೈ ಮುಗಿದು ಮನವಿ ಮಾಡಿದರು.

Comments


Top Stories

bottom of page