ದಿಲ್ಲಿಯಲ್ಲಿ ಫ್ರೀ ಬೀಸ್ ಘೋಷಣೆ ಮಾಡಿದ ಬಿಜೆಪಿ
- Ananthamurthy m Hegde
- Jan 18
- 2 min read
ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಗೆಲ್ಲಲು ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪ್ರಕಟಿಸಿರುವ ಉಚಿತ ಕೊಡುಗೆಗಳ ಬೆನ್ನತ್ತಿರುವ ಬಿಜೆಪಿ ಕೂಡ ಚುನಾವಣೆ ಗೆಲುವಿಗೆ ಹಲವು 'ಫ್ರೀಬೀಸ್' ಘೋಷಣೆ ಮಾಡಿದೆ.
ದಶಕದ ಬಳಿಕ ದಿಲ್ಲಿಯಲ್ಲಿಅಧಿಕಾರದ ಗದ್ದುಗೆ ಏರಲು ಪಣತೊಟ್ಟಿರುವ ಬಿಜೆಪಿಯು 'ಸಂಕಲ್ಪ ಪತ್ರ' ಹೆಸರಿನ ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. ಗರ್ಭಿಣಿಯರಿಗೆ 21 ಸಾವಿರ ರೂ. ನೆರವು, ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ಸಹಾಯ, 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ವಾಗ್ದಾನ ಪ್ರಣಾಳಿಕೆಯಲ್ಲಿನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.

ದಿಲ್ಲಿಯಲ್ಲಿ ಅಜಿತ್ ಸಾಹಸ
ದಿಲ್ಲಿವಿಧಾನಸಭೆ ಚುನಾವಣೆಗೆ ಎನ್‌ಸಿಪಿಯ ಅಜಿತ್ ಬಣ ಸ್ಪರ್ಧೆ ಮಾಡಲಿದೆ. 30 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, ಹೊಸದಿಲ್ಲಿಕ್ಷೇತ್ರದಿಂದ ಮಾಜಿ ಸಿಎಂ ಕೇಜ್ರಿವಾಲ್ ವಿರುದ್ಧ ವಿಶ್ವನಾಥ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಿದ್ದಾರೆ. ಸಿಎಂ ಆತಿಷಿ ವಿರುದ್ಧ ಜಮೀಲ್ ಅವರನ್ನು ಅಖಾಡಕ್ಕಿಳಿಸಲಾಗಿದೆ.
ಬಿಜೆಪಿ ಭರವಸೆಗಳು
ಮಗುವಿನ ಪಾಲನೆಗೆ ಗರ್ಭಿಣಿಯರಿಗೆ ಒಂದು ಬಾರಿ 21,000 ರೂ. ಆರ್ಥಿಕ ನೆರವು
ಮಹಿಳೆಯರಿಗೆ ಮಾಸಿಕ 2,500 ರೂ. ಸಹಾಯಧನ
ಹಿರಿಯ ನಾಗರಿಕರಿಗೆ (65-70 ವರ್ಷ) ಮಾಸಿಕ 2500 ರೂ. ಪಿಂಚಣಿ
70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 3000 ರೂ. ಪಿಂಚಣಿ
ಬಡ ಕುಟುಂಬಗಳಿಗೆ 500 ರೂ.ಗೆ ರಿಯಾಯಿತಿ ದರದಲ್ಲಿಅಡುಗೆ ಅನಿಲ ಸಿಲಿಂಡರ್. ಹೋಳಿ ಹಾಗೂ ದೀಪಾವಳಿಗೆ ತಲಾ ಒಂದು ಸಿಲಿಂಡರ್ ಉಚಿತ
ಆಯುಷ್ಮಾನ್ ಆರೋಗ್ಯ ಯೋಜನೆ ಜಾರಿ, ಹೆಚ್ಚುವರಿಯಾಗಿ 5ಲಕ್ಷ ರೂ. ಆರೋಗ್ಯ ಸುರಕ್ಷೆ ನೆರವು
ಕೊಳಗೇರಿ ಪ್ರದೇಶದ ಜನರಿಗೆ ಅಟಲ್ ಕ್ಯಾಂಟೀನ್‌ಗಳ ಮೂಲಕ 5 ರೂ.ಗೆ ಪೌಷ್ಟಿಕ ಆಹಾರ ವಿತರಣೆ
ಜಾರಿಯಲ್ಲಿರುವ ಉಚಿತ ವಿದ್ಯುತ್, ಮಹಿಳೆಯರ ಉಚಿತ ಬಸ್ ಸಂಚಾರ ಯೋಜನೆ ಮುಂದುವರಿಕೆ ಭರವಸೆ.
ಉಚಿತ ವಿರೋಧಿಸುತ್ತಿದ್ದ ಮೋದಿ ಮಾಡಿದ್ದೇನು?
ದಿಲ್ಲಿಯ ಅಧಿಕಾರ ಗದ್ದುಗೆ ಗೆಲ್ಲಲು ಫ್ರೀಬೀಸ್ ಮೊರೆ ಹೋದ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿರುವ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್, ''ಆಪ್‌ನ ಯೋಜನೆಗಳನ್ನು ನಕಲು ಮಾಡಲಾಗಿದೆ. ಉಚಿತ ಕೊಡುಗೆ ವಿರೋಧಿಸುತ್ತಿದ್ದ ಮೋದಿ ಅವರು ಏನು ಹೇಳುತ್ತಾರೆ. ಆರ್ಥಿಕತೆ ಬಗ್ಗೆ ಮಾತನಾಡಿದವರು ದಿಲ್ಲಿಘೋಷಣೆ ಬಗ್ಗೆ ಮೌನವಾಗಿರುವುದೇಕೆ. ಉಚಿತ ಕೊಡುಗೆಗಳ ಬಗ್ಗೆ ಟೀಕಿಸಿದ್ದ ಮೋದಿ ಅವರು ಫ್ರೀಬೀಸ್ ದೇಶದ ಜನತೆ ಪಾಲಿಗೆ ಉತ್ತಮ ಎಂಬುದನ್ನು ಒಪ್ಪಿಕೊಳ್ಳಬೇಕು,'' ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್
ದಿಲ್ಲಿಜನರಿಗೆ ಮತ್ತೊಂದು ಭರವಸೆ ನೀಡಿರುವ ಅರವಿಂದ್ ಕೇಜ್ರಿವಾಲ್, ''ಆಪ್ ಮರಳಿ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಸರಕಾರಿ ಬಸ್‌ಗಳಲ್ಲಿಉಚಿತ ಸಂಚಾರ ಯೋಜನೆ ಜಾರಿ ಮಡಲಾಗುವುದು,'' ಎಂದು ತಿಳಿಸಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ''ದಿಲ್ಲಿ ಮೆಟ್ರೊದಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಶೇ.50ರಷ್ಟು ರಿಯಾಯಿತಿ ನೀಡಿದರೆ ಉಳಿದ ಶೇ.50ರಷ್ಟು ಆಪ್ ಸರಕಾರ ಭರಿಸಲಿದೆ. ಇದರಿಂದ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಬಹುದು,'' ಎಂದು ಪರೋಕ್ಷವಾಗಿ ಸವಾಲು ಹಾಕಿದ್ದಾರೆ.
Comments