ನೆತನ್ಯಾಹು ಹತ್ಯೆಗೆ ಯತ್ನ: ಇಸ್ರೇಲ್ ಪ್ರಧಾನಿ ಮನೆ ಮೇಲೆ ಹೆಜ್ಬೊಲ್ಲಾ ಡ್ರೋನ್ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ, ವಿಡಿಯೋ!
- Oct 21, 2024
- 1 min read
ಡ್ರೋನ್ ದಾಳಿಗೆ ಗುರಿಯಾದ ಕಟ್ಟಡವು ನೆತನ್ಯಾಹು ಅವರ ಮನೆಯ ಭಾಗವಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಂಡಿವೆ.

ಟೆಲ್ ಅವೀವ್: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಪ್ರತಿಕಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನೆ ಮೇಲೆ ಡ್ರೋನ್ ಮೂಲಕ ದಾಳಿಗೆ ಹೆಜ್ಬುಲ್ಲಾ ಉಗ್ರ ಸಂಘಟನೆ ಯತ್ನಿಸಿದ್ದು ಈ ವೇಳೆ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಭದ್ರತಾ ಸಿಬ್ಬಂದಿ ಹತ್ಯೆ ಯತ್ನವನ್ನು ವಿಫಲಗೊಳಿಸಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸವನ್ನು ಗುರಿಯಾಗಿಸಿಕೊಂಡು ಹಿಜ್ಬುಲ್ಲಾ ಡ್ರೋನ್ ದಾಳಿ ನಡೆಸಿದೆ. ಪ್ರಧಾನಿ ನೆತನ್ಯಾಹು ಅವರ ಖಾಸಗಿ ನಿವಾಸವಿರುವ ಹೈಫಾದ ಸಿಸೇರಿಯಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಲೆಬನಾನ್‌ನಿಂದ ಉಡಾವಣೆಯಾದ ಡ್ರೋನ್ ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲಿ ಸೇನೆ (ಐಡಿಎಫ್) ಹೇಳಿದೆ. ಜೆರುಸಲೆಮ್ ಪೋಸ್ಟ್ ವರದಿಯ ಪ್ರಕಾರ, ಸಿಸೇರಿಯಾದಲ್ಲಿ ಡ್ರೋನ್ ದಾಳಿಯ ಸಮಯದಲ್ಲಿ ಟೆಲ್ ಅವಿವ್‌ನಲ್ಲಿ ಸೈರನ್‌ಗಳ ಶಬ್ದವೂ ಕೇಳಿಸಿತು.
ಡ್ರೋನ್ ದಾಳಿಗೆ ಗುರಿಯಾದ ಕಟ್ಟಡವು ನೆತನ್ಯಾಹು ಅವರ ಮನೆಯ ಭಾಗವಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಿಕೊಂಡಿವೆ. ಇನ್ನೂ ಎರಡು ಡ್ರೋನ್‌ಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗಿದ್ದು, ಅವುಗಳನ್ನು ತಡೆಹಿಡಿಯಲಾಗಿದೆ ಎಂದು ಐಡಿಎಫ್ ಹೇಳಿದೆ. ಈ ಕಾರಣದಿಂದಾಗಿ, ಗಿಲೋಟ್ ಮಿಲಿಟರಿ ನೆಲೆಯಲ್ಲಿ ಸೈರನ್‌ಗಳ ಕೂಗಿಕೊಂಡಿದ್ದವು. ಆದರೆ ನಂತರ ಆ ಪ್ರದೇಶದಲ್ಲಿ ಡ್ರೋನ್‌ಗಳು ಇರಲಿಲ್ಲ ಎಂದು ಸೇನೆಯು ಹೇಳಿದೆ.
ಶನಿವಾರ ಬೆಳಿಗ್ಗೆಯೇ, ಲೆಬನಾನ್‌ನಿಂದ ಟಿಬೇರಿಯಾಸ್ ಮತ್ತು ಇಸ್ರೇಲ್‌ನ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ರಾಕೆಟ್ ದಾಳಿಗಳು ಪ್ರಾರಂಭವಾದವು. ಹಲವಾರು ರಾಕೆಟ್‌ಗಳು ಗಲಿಷಿಯಾ ಸಮುದ್ರಕ್ಕೆ ಬೀಳುತ್ತಿರುವುದು ಕಂಡುಬಂದಿದೆ. ಯಾರಿಗೂ ಗಾಯಗಳಾಗಿಲ್ಲ. ಟೆಲ್ ಅವಿವ್ ಮತ್ತು ನಗರದ ಉತ್ತರ ಪ್ರದೇಶಗಳಲ್ಲಿ ಡ್ರೋನ್ ದಾಳಿಯ ಎಚ್ಚರಿಕೆಯ ಸೈರನ್‌ಗಳು ಕೂಗಿಕೊಂಡರೂ, ಆದರೆ ಅಲ್ಲಿ ಯಾವುದೇ ಸ್ಫೋಟಗಳು ಕೇಳಿಬಂದಿಲ್ಲ.
ಕಳೆದ ಕೆಲ ಗಂಟೆಗಳ ನಂತರ ಲೆಬನಾನ್‌ನಿಂದ ಇಸ್ರೇಲಿ ಪ್ರದೇಶವನ್ನು ಪ್ರವೇಶಿಸಿದ ಮೂರು ಯುಎವಿಗಳನ್ನು ಗುರುತಿಸಲಾಗಿದೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದು UAV ಸಿಸೇರಿಯಾ ಪ್ರದೇಶದಲ್ಲಿ ಕಟ್ಟಡಕ್ಕೆ ಅಪ್ಪಳಿಸಿತು. ಯಾರಿಗೂ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ.
Comments