top of page

ನೇಪಾಳ ಗಾಡಿಯಲ್ಲಿ ಭಾರೀ ಭೂಕಂಪ : 32 ಮಂದಿ ಸಾವು

  • Writer: Ananthamurthy m Hegde
    Ananthamurthy m Hegde
  • Jan 7
  • 1 min read

ಹೊಸದಿಲ್ಲಿ: ನೇಪಾಳ - ಟಿಬೆಟ್‌ ಗಡಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಭಾರೀ ಸಾವು ನೋವು ವರದಿಯಾಗಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 7.1 ದಾಖಲಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಬೆಳಿಗ್ಗೆ 6.35ಕ್ಕೆ ಮೊದಲ ಬಾರಿಗೆ ಭೂಮಿ ಕಂಪಿಸಿದೆ. ಕಂಪನದ ತೀವ್ರತೆಗೆ ಮನೆ, ಕಟ್ಟಡಗಳು ಧರಶಾಯಿಯಾಗಿವೆ. 4.7 ತೀವ್ರತೆಯ ಎರಡನೇ ಕಂಪನ 7:02ಕ್ಕೆ 10 ಕಿಲೋ ಮೀಟರ್‌ ಆಳದಲ್ಲಿ ನಡೆದಿದ್ದರೆ, 4.9 ತೀವ್ರತೆಯ ಮೂರನೇ ಕಂಪನ 7:07ಕ್ಕೆ 30 ಕಿಲೋ ಮೀಟರ್‌ ಆಳದಲ್ಲಿ ನಡೆದಿದೆ.

ನೇಪಾಳ-ಟಿಬೆಟ್‌ ಗಡಿಯ ಬಳಿ ಲೊಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ಪ್ರಾಥಮಿಕ ವರದಿಗಳ ಪ್ರಕಾರ ಪ್ರಬಲ ಭೂಕಂಪನದಿಂದ ಟಿಬೆಟ್‌ನಲ್ಲಿ 32 ಮಂದಿ ಸಾವನ್ನಪ್ಪಿದ್ದು, ಚೀನಾದ ಶಿಗಾಟ್ಸೆಯಲ್ಲಿ 9 ಮಂದಿ ಅಸುನೀಗಿದ್ದಾರೆ ಎಂದು ಎಂದು ವರದಿಯಾಗಿದೆ.

ಭೂಕಂಪದ ತೀವ್ರತೆಗೆ ಭೂತಾನ್‌, ಬಾಂಗ್ಲಾದೇಶ ಹಾಗೂ ಭಾರತದ ಕೆಲ ರಾಜ್ಯಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಭಾರತದ ರಾಜಧಾನಿ ದಿಲ್ಲಿ ಎನ್‌ಸಿಆರ್‌ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಲ್ಲೂ ಭೂಕಂಪನದ ಅನುಭವ ಆಗಿದ್ದು ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ಭೂಕಂಪನದ ವಿಡಿಯೋಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮನೆ, ಕಟ್ಟಡಗಳು ಕುಸಿಯುವ ದೃಶ್ಯಗಳು ಎದೆ ಝಲ್ಲೆನಿಸುತ್ತಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನೇಪಾಳದ ಕಠ್ಮಂಡು ಹಾಗೂ ಸುತ್ತಮುತ್ತಲಿನ ಪ್ರದೇಶದ ಜಿಲ್ಲೆಗಳಲ್ಲಿ ಭೂಮಿ ದೊಡ್ಡ ಮಟ್ಟಕ್ಕೆ ಕಂಪಿಸಿದ್ದು, ಈ ಭಾಗದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಹೋಗುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ನೇಪಾಳವು ಭೌಗೋಳಿಕವಾಗಿ ಸಕ್ರಿಯವಾಗಿರುವ ಪ್ರದೇಶದಲ್ಲಿದೆ. ಇಲ್ಲಿ ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳು ಘರ್ಷಣೆಯಾಗಿ ಹಿಮಾಲಯ ಪರ್ವತ ರೂಪುಗೊಂಡಿದೆ. ಇಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ.

ಈ ಹಿಂದೆ 2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಅತ್ಯಂತ ಭೀಕರ ಭೂಕಂಪ ಸಂಭವಿಸಿತ್ತು. ಈ ವೇಳೆ 9,000 ಜನರು ಸಾವನ್ನಪ್ಪಿದ್ದಲ್ಲದೆ 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಮನೆ-ಮಠ ಕಳೆದುಕೊಂಡಿದ್ದರು. ಇದೀಗ ಮಗದೊಂದು ಕಂಪನಕ್ಕೆ ನೇಪಾಳ ಸಾಕ್ಷಿಯಾಗಿದೆ.

Comentarios


Top Stories

bottom of page