top of page

ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ, ವಿಜಯೇಂದ್ರಗೆ ಬಿಗ್ ರಿಲೀಫ್

  • Writer: Ananthamurthy m Hegde
    Ananthamurthy m Hegde
  • Dec 4, 2024
  • 1 min read

ree

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದದ ಎಫ್ಐಆರ್ ಅನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದು ಪಡಿಸಿದೆ.

ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಚುನಾವಣಾ ಬಾಂಡ್ ಅನ್ನು ದೇಣಿಗೆ ಮೂಲಕ ಪಕ್ಷವು ಪಡೆದುಕೊಂಡಿದೆ. ಇದೊಂದು, ಬಹುಕೋಟಿ ಹಗರಣ, ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರ ವಿರುದ್ದ ದೂರು ದಾಖಲಾಗಿತ್ತು.

ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿಯ ಪ್ರಮುಖ ನಾಲ್ಕು ನಾಯಕರ ಮೇಲೆ ಎಫ್ಐಆರ್ ದಾಖಲಾಗಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯವು ಈಗ ಎಫ್ಐಆರ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆ ಮೂಲಕ, ನಾಲ್ವರು ನಾಯಕರಿಗೆ ರಿಲೀಫ್ ಸಿಕ್ಕಿದೆ.

ಎಫ್ಐಆರ್ ರದ್ದುಗೊಳಿಸಬೇಕೆಂದು ಈ ಪ್ರಕರಣದಲ್ಲಿ ಎ4 ಆಗಿರುವ ನಳಿನ್ ಕುಮಾರ್ ಕಟೀಲ್, ನ್ಯಾಯಾಲಯದ ಮೊರೆ ಹೋಗಿದ್ದರು. ಕಟೀಲ್ ಅವರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ. ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಎಫ್ಐಆರ್ ರದ್ದು ಪಡಿಸಿ, ಆದೇಶ ಪ್ರಕಟಿಸಿದೆ. ಇದರ ವಿಸ್ಕೃತ ಆದೇಶದ ಪ್ರತಿ, ಇನ್ನಷ್ಟೇ ಲಭ್ಯವಾಗಬೇಕಿದೆ.

ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್ತಿನ ಸಹ ಅಧ್ಯಕ್ಷರಾಗಿರುವ ಆದರ್ಶ ಆರ್ ಐಯ್ಯರ್ ಎನ್ನುವವರು ದೂರು ದಾಖಲಿಸಿದ್ದರು. ಇದರ ವಿಚಾರಣೆಯನ್ನು ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ಐಪಿಸಿ 384, 120ಬಿ ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ತಿಲಕ್ ನಗರ ಪೊಲೀಸರಿಗೆ ನಿರ್ದೇಶಿಸಲಾಗಿತ್ತು.

ಅರ್ಜಿದಾರರ ಪರವಾಗಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಮತ್ತು ಆರೋಪಿಗಳ ಪರವಾಗಿ ಕೆ.ಜಿ.ರಾಘವನ್ ವಾದಿಸಿದ್ದರು. ಪ್ರಕರಣದಲ್ಲಿ ದೂರುದಾರರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಾನಿಯಾಗಿಲ್ಲ ಎಂದು ರಾಘವನ್ ವಾದಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ದೇಣಿಗೆಯನ್ನು ಚುನಾವಣಾ ಬಾಂಡ್ ಗಳ ರೂಪದಲ್ಲಿ ಪಡೆದುಕೊಳ್ಳುತ್ತಿದ್ದವು. ಈ ಪದ್ದತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಜಿಐ ಡಿ.ವೈ.ಚಂದ್ರಚೂಡ್ ರದ್ದುಗೊಳಿಸಿ, ಐತಿಹಾಸಿಕ ತೀರ್ಪನ್ನು ನೀಡಿದ್ದರು. ಫೆಬ್ರವರಿ 2024ರಲ್ಲಿ ಸರ್ವೋಚ್ಚ ನ್ಯಾಯಾಲಯ ತೆಗೆದುಕೊಂಡ ಈ ನಿರ್ಧಾರ, ಭಾರೀ ಸಂಚಲನವನ್ನು ಮೂಡಿಸಿತ್ತು.

Comments


Top Stories

bottom of page