top of page

ನಕ್ಸಲ್ ದಾಳಿಗೆ ಎಂಟು ಮಂದಿ ಯೋಧರು ಹುತಾತ್ಮ

  • Writer: Ananthamurthy m Hegde
    Ananthamurthy m Hegde
  • Jan 7
  • 1 min read

ಛತ್ತೀಸ್‌ಗಢ: ಪೊಲೀಸ್ ವಾಹನದ ಮೇಲೆ ಮಾವೋವಾದಿಗಳು (ನಕ್ಸಲ್) ನಡೆಸಿದ ಐಇಡಿ ಸ್ಫೋಟದಲ್ಲಿ ಎಂಟು ಮಂದಿ ಯೋಧರು ಹಾಗೂ ಒಬ್ಬರು ವಾಹನ ಚಾಲಕ ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. 9 ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತೀಚೆಗೆ ಛತ್ತೀಸ್‌ಗಢ ಬಸ್ತಾರ್‌ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಐದು ನಕ್ಸಲರು ಸಾವನ್ನಪ್ಪಿದ್ದು, ಅದರ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.


ree

ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕುಟ್ರು ಎಂಬ ಪ್ರದೇಶದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಕುಟ್ರು-ಬೇದ್ರೆ ಮಾರ್ಗದಲ್ಲಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಯೋಧರ ತಂಡ ದಂತೇವಾಡ, ನಾರಾಯಣಪುರ ಮತ್ತು ಬಿಜಾಪುರದ ವ್ಯಾಪ್ತಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಹಿಂತಿರುಗುತ್ತಿದ್ದಾಗ, ಭದ್ರತಾ ಸಿಬ್ಬಂದಿ ವಾಹನವನ್ನು ಗುರಿಯಾಗಿಸಿ ನಕ್ಸಲರು ದಾಳಿ ನಡೆಸಿದ್ದಾರೆ.

ಬೆದ್ರೆ-ಕುತ್ರು ರಸ್ತೆಯಲ್ಲಿ ಬರುತ್ತಿದ್ದ ಜಿಲ್ಲಾ ಸಶಸ್ತ್ರ ಪಡೆ (ಡಿಆರ್‌ಜಿ) ಯೋಧರಿದ್ದ ವಾಹನವನ್ನು 60 ರಿಂದ 70 ಕೆ.ಜಿ ಸುಧಾರಿತ ಸ್ಫೋಟಕ (ಐಇಡಿ) ಬಳಸಿಕೊಂಡು ನಕ್ಸಲರು ಸ್ಫೋಟಿಸಿದ್ದಾರೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ 10 ಅಡಿ ಆಳದ ಗುಂಡಿ ಬಿದ್ದಿದೆ. ವಾಹನ ಸಂಪೂರ್ಣ ಜಖಂಗೊಂಡಿದ್ದು, ಕೆಲವು ಭಾಗಗಳು ಸಮೀಪದ ಮರಗಳಲ್ಲಿ ನೇತು ಬಿದ್ದಿರುವುದು ಕಂಡು ಬಂದಿದೆ. ಯೋಧರು ದೇಹಗಳು ಛಿದ್ರಛಿದ್ರವಾಗಿವೆ.

ಘಟನಾ ಸ್ಥಳದಿಂದ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಘಟನೆಯಲ್ಲಿ ಐಇಡಿ ಸ್ಫೋಟದಲ್ಲಿ ಪೊಲೀಸ್ ವಾಹನ ಸ್ಫೋಟಗೊಂಡಿದೆ ಎಂದು ಬಸ್ತಾರ್ ವಿಭಾಗದ ಐಜಿಪಿ ಪಿ ಸುಂದರ್ ರಾಜ್ ತಿಳಿಸಿದ್ದಾರೆ. ನಂತರದಲ್ಲಿ ಭದ್ರಾತ ಪಡೆ ಸಿಬ್ಬಂದಿ ಹಾಗೂ ನಕ್ಸಲರ್ ನಡುವೆ ಗುಂಡಿನ ಚಕಮಕಿ ನಡೆದಿದೆ. ಗಾಯಾಳುಗಳನ್ನು ಬಿಜಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ಕರೆದೊಯ್ಯಲಾಗಿದೆ. ಹುತಾತ್ಮರಾದ ಎಲ್ಲಾ ಯೋಧರು ದಾಂತೇವಾಡ ಡಿಆರ್‌ಜಿ (District Reserve Guard)ಯವರು ಎಂದು ಹೇಳಲಾಗಿದೆ. ಘಟನೆಯಲ್ಲಿ ನಾಲ್ವರು ಗಡಿ ಭದ್ರತಾ ಪಡೆ (BSF) ಯೋಧರು ಸೇರಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಾಂಬ್‌ ನಿಷ್ಕ್ರಿಯ ದಳ ಹಾಗೂ ವಿಧಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದರು. ಮಣ್ಣು ಹಾಗೂ ಹುಲ್ಲು ಬಳಸಿಕೊಂಡು ಸ್ಪೋಟಕವನ್ನು ಭೂಮಿಯೊಳಗೆ ಅಡಗಿಸಿಡಲಾಗಿತ್ತು. 150 ಮೀ. ಉದ್ದದ ವೈರ್‌ ಬಳಸಿಕೊಂಡು ಯೋಧರಿದ್ದ ವಾಹನ ಆಗಮಿಸುತ್ತಲೇ ಸ್ಫೋಟಿಸಲಾಗಿದೆ ಎಂಬ ಸಂಗತಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

ಮಾರ್ಚ್ ಹೊತ್ತಿಗೆ ನಕ್ಸಲ್‌ ನಿರ್ಮೂಲನೆ:

ನಕ್ಸಲರ ಕೃತ್ಯವನ್ನು ಬಲವಾಗಿ ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಮಾವೋವಾದಿಗಳ ಹೇಯ ಕೃತ್ಯವನ್ನು ಸಹಿಸುವುದಿಲ್ಲ. ನಮ್ಮ ವೀರ ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಮುಂದಿನ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲ್‌ ಪಿಡುಗನ್ನು ಬುಡಸಮೇತ ಕಿತ್ತು ಹಾಕಲಾಗುವುದು,’ ಎಂದು ವಾಗ್ದಾನ ಮಾಡಿದರು. ಘಟನೆಗೆ ಕಂಬನಿ ಮಿಡಿದಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್‌ ಸಾಯಿ ಅವರು, ಮೃತ ಯೋಧರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ‘ಹುತಾತ್ಮ ಯೋಧರ ಕುಟುಂಬಗಳಿಗೆ ಸರಕಾರ ಅಗತ್ಯ ನೆರವು ನೀಡಲಿದೆ,’ ಎಂದು ತಿಳಿಸಿದ್ದಾರೆ.

Comments


Top Stories

bottom of page