top of page

ಪುಟ್ಟ ಮಕ್ಕಳ ಪಾಕ್‌ಗೆ ಕಳುಹಿಸಿ ಆಚೇ ಹೋಗಲಾರದೇ ಇಲ್ಲೂ ಇರಲಾಗದೇ ತಾಯಿಯ ಸಂಕಟ

  • Writer: Ananthamurthy m Hegde
    Ananthamurthy m Hegde
  • Apr 28
  • 2 min read

ನವದೆಹಲಿ: ಪಹಲ್ಗಾಮ್‌ ದಾಳಿಯ ನಂತರ ಭಾರತದಲ್ಲಿರುವ ಪಾಕಿಸ್ತಾನಿ ನಿವಾಸಿಗಳೆಲ್ಲರೂ ದೇಶ ಬಿಟ್ಟು ಹೋಗುವಂತೆ ಸರ್ಕಾರ ಮಾಡಿದ ಆದೇಶದಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ವೈವಾಹಿಕ ಸಂಬಂಧ ಹೊಂದಿರುವ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಅತ್ತ ಪಾಕಿಸ್ತಾನಕ್ಕೂ ಹೋಗಲಾಗದೇ ಇತ್ತ ಭಾರತದಲ್ಲೂ ಇರಲಾಗದಂತಹ ತ್ರಿಶಂಕು ಸ್ಥಿತಿ ಅನೇಕರನ್ನು ಕಾಡುತ್ತಿದೆ. ಇಂತಹ ಒಂದು ಧರ್ಮಸಂಕಟದ ಸ್ಥಿತಿಗೆ ಅಟ್ಟಾರಿ ವಾಘಾ ಗಡಿ ಹಾಗೂ ಅಲ್ಲಿನ ಅಧಿಕಾರಿಗಳು ಸಾಕ್ಷಿಯಾದರು.

ree

ಪಾಕಿಸ್ತಾನದವರೆಲ್ಲರೂ ಭಾರತ ತೊರೆಯಬೇಕು ಎಂದು ಆದೇಶ ನೀಡಿದ್ದರಿಂದ ಉತ್ತರ ಪ್ರದೇಶದ ಮೀರತ್ ನಿವಾಸಿ ಸನಾ ಎಂಬ ಭಾರತೀಯ ಪೌರತ್ವ ಹೊಂದಿದ್ದ ಮಹಿಳೆ ಆಟರಿ ವಾಘಾ ಬಾರ್ಡರ್ ತಲುಪಿದ್ದರು. ಆದರೆ ಆಕೆಯ ಬಳಿ ಇದ್ದಿದ್ದು, ಭಾರತೀಯ ಪಾಸ್‌ಪೋರ್ಟ್ ಈ ಕಾರಣಕ್ಕೆ ಆಕೆಯನ್ನು ಗಡಿ ದಾಟದಂತೆ ಅಧಿಕಾರಿಗಳು ಅಲ್ಲಿ ತಡೆದು ನಿಲ್ಲಿಸಿದರು. ಆದರೆ ಆಕೆಯ ಇಬ್ಬರು ಮಕ್ಕಳ ಬಳಿ ಇದ್ದಿದ್ದು, ಪಾಕಿಸ್ತಾನಿ ಪಾಸ್‌ಪೋರ್ಟ್‌ ಹೀಗಾಗಿ ಮಕ್ಕಳನ್ನು ಗಡಿ ದಾಟಲು ಬಿಟ್ಟು ತಾಯಿಯನ್ನು ಭಾರತದೊಳಗೆ ಉಳಿಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಮಕ್ಕಳು ಕೂಡ ಅಮ್ಮನ ಅಗತ್ಯವಿದ್ದಂತಹ ಪುಟ್ಟ ಮಕ್ಕಳಾಗಿದ್ದರು, ಎರಡು ಮಕ್ಕಳಲ್ಲಿ ಒಬ್ಬ 3 ವರ್ಷದ ಗಂಡು ಮಗುವಾಗಿದ್ದರೆ ಮಗಳು ಒಂದು ವರ್ಷದ ಕೂಸು. ಅವರೆಲ್ಲರೂ ಅಲ್ಪಾವಧಿಯ ವೀಸಾವನ್ನು ಹೊಂದಿದ್ದರು. 

ಹೀಗೆ ಅತ್ತ ಹೋಗಲು ಆಗದೇ ಇಲ್ಲಿ ಇರಲು ಆಗದೇ ಸಂಕಷ್ಟಕ್ಕೆ ಸಿಕ್ಕ 30 ವರ್ಷದ ಮಹಿಳೆ ಸನಾ ಈಕೆ ಪಾಕಿಸ್ತಾನ ಮೂಲದ  ಕರಾಚಿಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಬಿಲಾಲ್ ಎಂಬುವರನ್ನು 2020ರಲ್ಲಿ ಮದುವೆಯಾಗಿದ್ದರು. ಇತ್ತೀಚೆಗಷ್ಟೇ ತನ್ನ ಪೋಷಕರನ್ನು ನೋಡುವುದಕ್ಕಾಗಿ ಆಕೆ ಭಾರತಕ್ಕೆ ಬಂದಿದ್ದರು. ಆದರೆ ಈಗ ಪಾಕಿಸ್ತಾನಕ್ಕೆ ಮರಳಲಾಗದಂತಹ ಸ್ಥಿತಿ ಸನಾಗೆ ಎದುರಾಗಿದೆ. 

ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರ ಪಾಕಿಸ್ತಾನಿಗಳು ದೇಶ ಬಿಟ್ಟು ಹೋಗುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ದೇಶ ಬಿಡುವಂತೆ ನಮಗೆ ಸೂಚಿಸಿದರು. ನಂತರ ಅವರು ತಮ್ಮ ಕುಟುಂಬ ಸದಸ್ಯರು ಹಾಗೂ ತಮ್ಮ ಮಕ್ಕಳೊಂದಿಗೆ ಪಾಕ್‌ಗೆ ತೆರಳಲು ಅಟ್ಟಾರಿ-ವಾಘಾ ಗಡಿಗೆ ತೆರಳಿದ್ದಾರೆ. ಆದರೆ ಅಲ್ಲಿ ಅಧಿಕಾರಿಗಳು ಅವರನ್ನು ತಡೆದಿದ್ದು, ಭಾರತೀಯ ಪಾಸ್‌ಪೋರ್ಟ್ ಇರುವುದರಿಂದ ಮೀರತ್‌ಗೆ ಹಿಂತಿರುಗುವಂತೆ ಹೇಳಿದರು. ಇತ್ತ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದ ಮಕ್ಕಳು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಸನಾ ಅಲ್ಲೇ ಜೋರಾಗಿ ಅಳಲು ಶುರು ಮಾಡಿದ್ದಾರೆ. ಇತ್ತ ಸನಾಳ ಮಕ್ಕಳು ತಮ್ಮ ತಾಯಿಗೆ ವಿದಾಯ ಹೇಳಿ ತಮ್ಮ ತಂದೆಯ ಬಳಿ ಹೋಗಲು ಒಂಟಿಯಾಗಿ ಗಡಿ ದಾಟಿದ್ದಾರೆ.

ನನ್ನ ಮಕ್ಕಳು ಇಲ್ಲಿ ಇರಲು ಸಾಧ್ಯವಿಲ್ಲ ಮತ್ತು ನಾನು ಅಲ್ಲಿಗೆ ಹೋಗಲು ಸಾಧ್ಯವಿಲ್ಲ, ನಮ್ಮನ್ನು ಸ್ವೀಕರಿಸಲು ನನ್ನ ಪತಿ ಕೂಡ ಗಡಿಗೆ ಬಂದಿದ್ದರು ಎಂದು ಸನಾ ಹೇಳಿದ್ದಾರೆ. ಮಕ್ಕಳು ಕೂಡ ತುಂಬಾ ಚಿಕ್ಕವರಾಗಿರುವುದರಿಂದ ತಮ್ಮ ತಾಯಿ ಇಲ್ಲದೆ ಇರುವುದು ಕಷ್ಟ ಎಂದು ಕುಟುಂಬವು ಗಡಿಯಲ್ಲಿರುವ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಸನಾಳನ್ನು ಮೀರತ್‌ಗೆ ವಾಪಸ್ ಕಳುಹಿಸಿದರು ಮತ್ತು ಹೊಸ ಸರ್ಕಾರಿ ಆದೇಶಗಳಿಗಾಗಿ ಕಾಯುವಂತೆ ಹೇಳಿದ್ದಾರೆ ಎಂದು ವರದಿಯಾಗಿದೆ. 

ಮದುವೆಯ ನಂತರ ಇದು ಭಾರತಕ್ಕೆ ತನ್ನ ಎರಡನೇ ಭೇಟಿಯಾಗಿದ್ದು,  ಸುಮಾರು 3 ವರ್ಷಗಳ ಹಿಂದೆ ಒಮ್ಮೆ ಬಂದಿದ್ದಾಗಿ ಆಕೆ ಹೇಳಿದ್ದಾರೆ. ಇದೇ ವೇಳೆ ಪಹಲ್ಗಾಮ್ ದಾಳಿಯ ಹಿಂದಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕರೆ ನೀಡಿದ ಆಕೆ  ತನ್ನ ಮತ್ತು ತನ್ನ ಮಕ್ಕಳ ಜೊತೆ ಪಾಕಿಸ್ತಾನಕ್ಕೆ ಹೋಗಲು ಬಿಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಕಳೆದ ಎರಡು ದಿನಗಳಲ್ಲಿ 250 ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿ ಬಿಂದುವಿನ ಮೂಲಕ ಭಾರತವನ್ನು ತೊರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments


Top Stories

bottom of page