top of page

ಪಕ್ಷ ತೊರೆದು ಜೆಡಿಎಸ್ ಬಾಗಿಲು ಬಡಿದಿದ್ದ ಯಡಿಯೂರಪ್ಪ ಮತ್ತೇಕೆ ಬಿಜೆಪಿಗೆ ಮರಳಿದರು? ಲಿಂಬಾವಳಿ ಅಸಮಾಧಾನ

  • Writer: Ananthamurthy m Hegde
    Ananthamurthy m Hegde
  • Jul 9
  • 1 min read

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುತೂಹಲದ ನಡುವೆ ಭಿನ್ನರ ಚಟುವಟಿಕೆ ಹೆಚ್ಚಾಗಿದೆ. ಇದರ ನಡುವೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಬಿಎಸ್‌ ಯಡಿಯೂರಪ್ಪ ವಿರುದ್ದ ಹರಿಹಾಯ್ದಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ತೊರೆದು ಹೋಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರ ಮನೆ ಬಾಗಿಲು ಬಡಿದು, ಮತ್ತೇಕೆ ಪಕ್ಷಕ್ಕೆ ಮರಳಿದರೋ ಗೊತ್ತಿಲ್ಲ ಎಂದು ಲಿಂಬಾವಳಿ ಕಿಡಿ ಕಾರಿದ್ದಾರೆ.

ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗವು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ನಮ್ಮಾಭಿಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಬಿ.ಎಸ್‌. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಲು, ಮುಖ್ಯಮಂತ್ರಿ ಹುದ್ದೆಗೆ ಏರಲು ಜಿ.ಎಂ. ಸಿದ್ದೇಶ್ವರ ಪರಿಶ್ರಮವಿದೆ. ಆರ್ಥಿಕ ಶಕ್ತಿಯಾಗಿ, ಹೆಗಲಿಗೆ ಹೆಗಲು ಕೊಟ್ಟು ಜೊತೆಗಿದ್ದ ಸ್ನೇಹಿತನನ್ನು ಯಡಿಯೂರಪ್ಪ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಬೇಸರವಿದೆ ಎಂದು ಅಸಮಾಧಾನ ಹೊರಹಾಕಿದರು.

ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಗೆಲ್ಲಲು ಕೂಡ ಜಿ.ಎಂ.ಸಿದ್ದೇಶ್ವರ ಕಾರಣ. ಅಲ್ಲಿದ್ದ ಅಸಮಾಧಾನ, ಸಮಸ್ಯೆ ಸ್ವತಃ ಸರಿಪಡಿಸಿದ್ದಾರೆ. ಅನಂತಕುಮಾರ್ ಅವರೊಂದಿಗೆ ಸಮಸ್ಯೆ ಎದುರಾದಾಗ ನಾವು ಸಂಪರ್ಕ ಮಾಡುತ್ತಿದ್ದು ಸಿದ್ದೇಶ್ವರ ಅವರನ್ನೇ. ಅವರ ಮೂಲಕ ಮಾತನಾಡಿಸಿ ರಾಜ್ಯ ಮಟ್ಟದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇವೆ. ಸಿದ್ದೇಶ್ವರ ಕುಟುಂಬಕ್ಕೆ ಆಗಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪಕ್ಷದಲ್ಲಿ ಸಮಸ್ಯೆ ಸೃಷ್ಟಿಸುವ ವ್ಯಕ್ತಿಗಳನ್ನು ಮಟ್ಟಹಾಕಬೇಕಿದೆ. ಇದಕ್ಕೆ ನಮ್ಮ ಶಕ್ತಿಯನ್ನು ಇನ್ನೂ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಸಿದ್ದೇಶ್ವರ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಭದ್ರಾ ಜಲಾಶಯದ ಬಲದಂಡೆ ನಾಲೆಯ ವಿಚಾರವಾಗಿ ಚರ್ಚಿಸಲು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದೆ. ನಾನು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವುದಿಲ್ಲ. ತಪ್ಪು ದಾರಿಗೆ ಎಳೆಯುವ ಹುನ್ನಾರವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದರು.

Comments


Top Stories

bottom of page