ಪಹಲ್ಗಾಮ್ ದಾಳಿಯಿಂದ ಹೆಚ್ಚಿದ ಉದ್ವಿಗ್ನತೆ; ಪಾಕ್ ಪ್ರಜೆಗಳ ಗಡಿಪಾರು
- Ananthamurthy m Hegde
- Apr 28
- 1 min read
ಜೈಪುರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದ್ದು, ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯು ಅಸಂಖ್ಯಾತ ಸಾಮಾನ್ಯ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಉಗ್ರರ ದಾಳಿ ಬಳಿಕ ಕಠಿಣ ನಿಲುವು ತಳೆದ ಭಾರತ ಸರ್ಕಾರ, ಪಾಕಿಸ್ತಾನಿ ನಾಗರಿಕರ ವೀಸಾಗಳನ್ನು ರದ್ದುಗೊಳಿಸಿ, ಅವರನ್ನು ತಮ್ಮ ದೇಶಕ್ಕೆ ಮರಳುವಂತೆ ನಿರ್ದೇಶಿಸಿದೆ. ಈ ನಿರ್ಧಾರವು ಇತ್ತೀಚೆಗೆ ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಬಂದಿರುವ ಹಲವಾರು ಪಾಕಿಸ್ತಾನಿ ನಾಗರಿಕರು ಮತ್ತು ಅವರ ಕುಟುಂಬಗಳ ಜೀವನವನ್ನು ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.

ರಾಜಸ್ಥಾನದ ಜೈಸಲ್ಮೇರ್‌ನ ದೇವಿಕೋಟ್‌ನ ನಿವಾಸಿಗಳಾದ ಸೋದರ ಸಂಬಂಧಿಗಳಾದ ಸಲೇಹ್ ಮೊಹಮ್ಮದ್ ಮತ್ತು ಮುಷ್ತಾಕ್ ಅಲಿ, ಜುಲೈ 2023 ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ತಮ್ಮ ಚಿಕ್ಕಮ್ಮನನ್ನು ಭೇಟಿಯಾಗಲು ಹೋಗಿದ್ದು, ಈ ವೇಳೆ ಅಲ್ಲಿನ ಕರಮ್ ಖತುನ್ (21) ಮತ್ತು ಸಚುಲ್ (22) ಎಂಬ ಇಬ್ಬರು ಯುವತಿಯರ ಪ್ರೀತಿಗೆ ಬಿದ್ದು, 2023ರ ಆಗಸ್ಟ್ ತಿಂಗಳನಲ್ಲಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅವರನ್ನು ವಿವಾಹವಾಗಿದ್ದರು.
ಬಳಿಕ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಯುವಕರು ಭಾರತಕ್ಕೆ ವಾಪಸ್ಸಾಗಲೇಬೇಕಾಗಿತ್ತು. ವಿವಾಹದ ಹೊರತಾಗಿಯೂ ಯುವತಿಯರಿಗೆ ಭಾರತಕ್ಕೆ ಬರಲು ವೀಸಾ ಸಿಕ್ಕಿರಲಿಲ್ಲ. ಸುಮಾರು ಒಂದೂವರೆ ವರ್ಷಗಳ ಕಾಯುವಿಕೆಯ ನಂತರ, ಯುವತಿಯರಿಗೆ ವೀಸಾ ಸಿಕ್ಕಿತ್ತು. ಇದರಂತೆ ಏಪ್ರಿಲ್ 11 ರಂದು ಜೈಸಲ್ಮೇರ್‌ಗೆ ಬಂದಿಳಿದು, ತಮ್ಮ ಪತಿಗಳ ಜೊತೆ ಜೀವನ ಪ್ರಾರಂಭಿಸಿದ್ದರು.
ಆದರೆ, 10 ದಿನಗಳ ನಂತರ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಈ ಜೋಡಿಗಳ ದಾಂಪತ್ಯ ಜೀವನದ ಸಂತಸವನ್ನು ಕಸಿದುಕೊಂಡಿದೆ. ಪಾಕಿಸ್ತಾನಿ ಪ್ರಜೆಗಳು ಅವರ ದೇಶಕ್ಕೆ ವಾಪಸ್ಸಾಗುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಜೋಡಿಗಳು ಸಂಕಷ್ಟ ಎದುರಿಸುವಂತಾಗಿದೆ.
ಯುವತಿಯರು ಭಾರತಕ್ಕೆ ಬಂದ ನಂತರ ಕುಟುಂಬವು ದೀರ್ಘಾವಧಿಯ ವೀಸಾಕ್ಕೆ ಆರ್ಜಿ ಸಲ್ಲಿಸಿತ್ತು. ಆದರೆ, ಇದೀಗ ಪಾಕಿಸ್ತಾನಕ್ಕೆ ಹಿಂತಿರುವ ಅನಿವಾರ್ಯತೆ ಎದುರಾಗಿದೆ. ಆಡಳಿತ ಮಂಡಳಿ ಪಾಕಿಸ್ತಾನಕ್ಕೆ ಹಿಂತಿರುಗುವಂತೆ ಆದೇಶಿಸಿದೆ. ಈ ಉದ್ವಿಗ್ನ ಸಮಯದಲ್ಲಿ ಇಬ್ಬರು ಹೇಗೆ ಹೋಗುತ್ತಾರೆಂದು ಕುಟುಂಬವು ಪ್ರಶ್ನಿಸಿದೆ.
ವಾರಾಂತ್ಯದಲ್ಲಿ ರಾಜಸ್ಥಾನದ ಬಾರ್ಮರ್‌ಗೆ ಬಂದ ಪಾಕಿಸ್ತಾನದ ತಂಡೋ ಅಲ್ಲಾಹ್ಯಾರ್ ಜಿಲ್ಲೆಯ 18 ಜನರ ಕುಟುಂಬವೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದೆ.
Comments