top of page

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ : ವಿವಿಧ ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನೆ

  • Writer: Ananthamurthy m Hegde
    Ananthamurthy m Hegde
  • Dec 10, 2024
  • 1 min read

ree

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು, ಮತ್ತಿತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ವಿರೋಧಿಸಿ ಆರ್‌ಎಸ್‌ಎಸ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಚಾಣಕ್ಯಪುರಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಪಾಲ್ಗೊಂಡರು. ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಹೈಕಮಿಷನ್ ಕಚೇರಿ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಈ ವಿಷಯದಲ್ಲಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ನರಮೇಧವನ್ನು ನಿಲ್ಲಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರ ವೀರೇಂದ್ರ ಸಿಂಗ್, ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುತ್ತೇವೆ. ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಕ್ಷಣವೇ ನಿಲ್ಲಿಸುವಂತೆ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದರು.

ಬಾಂಗ್ಲಾದೇಶದ 170 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು ಶೇ. 8ರಷ್ಟು ಹಿಂದೂಗಳು ಇದ್ದಾರೆ. ಆಗಸ್ಟ್ 5 ರಂದು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ಪತನದ ನಂತರ ಬಾಂಗ್ಲಾದೇಶದ 50 ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ 200ಕ್ಕೂ ಹೆಚ್ಚು ದಾಳಿಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ಈ ಮಧ್ಯೆ ಇದೇ ವಿಷಯ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆಯು ನಿರ್ಣಾಯಕವಾಗಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಇತ್ತೀಚಿನ ವರದಿಗಳು ಆತಂಕಕಾರಿಯಾಗಿದೆ. ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಒತ್ತಾಯಿಸಿದರು.


Comments


Top Stories

bottom of page