ಬಂಗಾಳ ಕೊಲ್ಲಿಯಲ್ಲಿ ಮುಂದಿನ ೧೦ ದಿನದಲ್ಲಿ ೨ ವಾಯುಭಾರ ಆಗುವ ಸಾಧ್ಯತೆ : ರಾಜ್ಯದಲ್ಲೂ ಮಳೆ ನಿರೀಕ್ಷೆ
- Ananthamurthy m Hegde
- Dec 9, 2024
- 1 min read

ಕಳೆದ ಒಂದು ವಾರ ಫೆಂಗಲ್ ಚಂಡಮಾರುತ ಅಬ್ಬರಕ್ಕೆ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜನ ಕಂಗಾಲಾಗಿದ್ದರು. ಇದೀಗ ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆಂಗಲ್ ಚಂಡಮಾರುತದ ಹಾನಿಯಿಂದ ಜನರು ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೆರಡು ವಾಯುಭಾರ ಕುಸಿತ ಸೃಷ್ಟಿಯಾಗುವ ಲಕ್ಷಣ ಬಂಗಾಳಕೊಲ್ಲಿಯಲ್ಲಿ ಕಂಡು ಬರುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.ಹೌದು.. ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲೂ ಭಾರೀ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೊದಲ ವಾಯುಭಾರ ಕುಸಿತ ಉಂಟಾಗಲಿದ್ದು, ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 14 ಮತ್ತು 15 ರಂದು ಮಳೆಯಾಗಲಿದೆ. 2ನೇ ವಾಯುಭಾರ ಕುಸಿತ ಡಿಸೆಂಬರ್ 16ಕ್ಕೆ ಉಂಟಾಗಲಿದ್ದು, ಡಿಸೆಂಬರ್ 17-18 ಕ್ಕೆ ಜೋರು ಮಳೆಯಾಗಲಿದೆ ಎಂದುಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಮುಂದಿನ 5 ದಿನ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದೆ. ಅಲ್ಲದೇ ಸೈಕ್ಲೋನ್ ಎಫೆಕ್ಟ್‌ನಿಂದ ಈಗಾಗಲೇ ಭಾರಿ ಮಳೆ ಎಚ್ಚರಿಕೆಯನ್ನು ನೀಡಿದ್ದು, ರೈತರಿಗೆ ಎಚ್ಚರಿಕೆ ವಹಿಸುವಂತೆ ಹೇಳಲಾಗಿದೆ. ಯಾಕಂದ್ರೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಕಟಾವಿಗೆ ಬಂದಿವೆ. ಮತ್ತೆ ವಾಯುಭಾರ ಕುಸಿತವಾದರೆ.. ಜೋರು ಮಳೆಯಾಗಿ ಬೆಳೆಗಳು ಸಂಪೂರ್ಣ ನಾಶವಾಗುವ ಸಾಧ್ಯತೆ ಇರುತ್ತೆ.. ಹೀಗಾಗಿ ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಇಲಾಖೆ ಸೂಚಿಸಿದೆ.ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ವಿವಿಧ ಬೆಳೆಗಳ ಕೊಯ್ಲಿಗೂ ತಡೆಯೊಡ್ಡಿದೆ. ಎಲ್ಲೆಡೆ ಭತ್ತದ ಬೆಳೆ ಕೊಯ್ಲಿಗೆ ಬಂದಿದ್ದು, ಯಂತ್ರಗಳನ್ನು ಗದ್ದೆಗೆ ಇಳಿಸುವ ಸಮಯದಲ್ಲಿ ಮಳೆ ಬಂದು ಕೆಲಸ ಅರ್ಧಕ್ಕೆ ನಿಂತಿವೆ. ಮಳೆ ಕಡಿಮೆಯಾಗಿ ಬಿಸಿಲು ಬಂತೆಂದು ಮತ್ತೆ ಕೊಯ್ಲಿಗೆ ಇಳಿದರೆ ದಿಢೀರನೆ ಮಳೆ ಬಂದು ಬೆಳೆಯನ್ನು ತೋಯಿಸಿದೆ. ಹೀಗಾಗಿ ರೈತರು ತಮ್ಮ, ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗೆ ಮಳೆ ಮುಂದುವರಿದ್ರೆ ಫಸಲೆಲ್ಲ ಹಾಳಾಗುವ ಸಾಧ್ಯತೆ ಇದೆ. ಅಲ್ಲದೇ ನಿನ್ನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಸೊರಬ ಮತ್ತು ಸಾಗರ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದೆ.ಈಗಾಗಲೇ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದ ಫೆಂಗಲ್ ಚಂಡಮಾರುತ ಅಬ್ಬರಿಸಿ ಬೊಬ್ಬಿರಿದಿದ್ದಾನೆ, ತಮಿಳು ನಾಡು, ಪುದುಚೇರಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಫೆಂಗಲ್ ಸೈಕ್ಲೋನ್ ನರಕವನ್ನೇ ಸೃಷ್ಠಿಸಿತ್ತು.. ಈಗ ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪ್ರಭಾವದಿಂದ ರಾಜ್ಯದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರಲ್ಲೂ ಮಳೆ ಎಚ್ಚರಿಕೆ ರೈತರಿಗೆ ಆತಂಕ ತಂದೊಡ್ಡಿದ್ದು, ಬೆಳೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಚಿಂತಿ ಶುರುವಾಗಿದೆ..















Comments