ಬಿಹಾರದ ನೂತನ ರಾಜ್ಯಪಾಲರಾಗಿ ಆರಿಫ್ ಮೊಹಮ್ಮದ್ ಖಾನ್ ಆಯ್ಕೆ
- Ananthamurthy m Hegde
- Jan 2, 2025
- 1 min read

ಪಾಟ್ನಾ: ಕೇರಳದ ರಾಜ್ಯಪಾಲರಾಗಿದ್ದ ಆರೀಫ್ ಮೊಹಮ್ಮದ್ ಖಾನ್ ಇದೀಗ ಬಿಹಾರದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಾಟ್ನಾದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ, ಆರೀಫ್ ಮೊಹಮ್ಮದ್ ಬಿಹಾರದ 42ನೇ ರಾಜ್ಯಪಾಲರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಆರೀಫ್ ಮೊಹಮ್ಮದ್ ಖಾನ್, "ಬಿಹಾರಕ್ಕೆ ಭವ್ಯವಾದ ಇತಿಹಾಸವಿದೆ ಮತ್ತು ಬಿಹಾರದ ಜನರಿಗೆ ಉತ್ತಮ ಸಾಮರ್ಥ್ಯವಿದೆ. ಬಿಹಾರದ ಜನ ದೇಶದ ಸಂಪೂರ್ಣ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.." ಎಂದು ಹೇಳಿದರು.
"ನಾನು ಈಗಷ್ಟೇ ಬಿಹಾರದ ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಬಿಹಾರದ ಅಭಿವೃದ್ಧಿಗಾಗಿ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ರಾಜ್ಯದ ಒಳಿತಿಗಾಗಿ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧ.." ಎಂದು ಆರೀಫ್ ಮೊಹಮ್ಮದ್ ಖಾನ್ ನುಡಿದರು.
ಇದಕ್ಕೂ ಮೊದಲು ದೇಶದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ ಆರೀಫ್ ಮೊಹಮ್ಮದ್ ಖಾನ್, "ರಾಜೇಂದ್ರ ಪ್ರಸಾದ್ ಅವರಂತಹ ಮಹಾನ್ ನಾಯಕರಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಈ ಮಹಾನ್ ನಾಯಕರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ.." ಎಂದು ಹೇಳಿದರು.
ಇನ್ನು ನೂತನ ರಾಜ್ಯಪಾಲರನ್ನು ಅಭಿನಂದಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರೀಫ್ ಮೊಹಮ್ಮದ್ ಖಾನ್ ಅವರ ಮಾರ್ಗದರ್ಶನದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ನುಡಿದರು.
ಅದೇ ರೀತಿ ನೂತನ ರಾಜ್ಯಪಾಲರನ್ನು ಭೇಟಿ ಮಾಡಿ ಶುಭ ಕೋರಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹೊಸ ರಾಜ್ಯಪಾಲರ ಕೊಡುಗೆ ಇರಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು.
ಇನ್ನು ಬಿಹಾರ ನೂತನ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಹೊಸ ರಾಜ್ಯಪಾಲರು ಸಂವಿಧಾನ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.
ಬಿಹಾರ ನೂತನ ರಾಜ್ಯಪಾಲರ ಪ್ರಮಾಣವಚನ ಸಮಾರಂಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಇತರ ಸಚಿವರು ಉಪಸ್ಥಿತರಿದ್ದರು.
ಅದೇ ರೀತಿ ಕೇರಳದ 23ನೇ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅರೀಫ್ ಮೊಹಮ್ಮದ್ ಖಾನ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜೇಂದ್ರ ಅರ್ಲಕರ್ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್‌ದಾರ್ ಅರ್ಲೇಕರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ವಿವಿಧ ಪಕ್ಷಗಳ ಹಿರಿಯ ನಾಯಕರು ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.















Comments