top of page

ಭಾರತೀಯ ರಾಯಭಾರಿಯೊಂದಿಗೆ ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಸಭೆ

  • Writer: Ananthamurthy m Hegde
    Ananthamurthy m Hegde
  • Jan 13
  • 1 min read

ಢಾಕಾ: ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರಿ ಪ್ರಣಯ್ ವರ್ಮಾ ಅವರೊಂದಿಗೆ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಾಶಿಮ್ ಉದ್ದೀನ್ ಭಾನುವಾರ ಸಭೆ ನಡೆಸಿದ್ದು, ಗಡಿಯಲ್ಲಿನ ಇತ್ತೀಚಿನ ಉದ್ವಿಗ್ನ ಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನಾ ಗಡಿಯಲ್ಲಿನ ಉದ್ವಿಗ್ನತೆ ಕುರಿತು ಚರ್ಚಿಸಲು ಬಾಂಗ್ಲಾ ವಿದೇಶಾಂಗ ಸಚಿವಾಲಯ ಪ್ರಣಯ್ ವರ್ಮಾ ಅವರಿಗೆ ಸಮನ್ಸ್ ನೀಡಿದೆ ಎಂದು ಸರ್ಕಾರಿ ಸುದ್ದಿಸಂಸ್ಥೆ 'ಬಿಎಸ್ ಎಸ್ ' ವರದಿ ಮಾಡಿತ್ತು. ಆದರೆ ಹೀಗೆ ಹೇಳಬೇಡಿ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಬಾಂಗ್ಲಾದೇಶ- ಭಾರತ ಗಡಿಯಲ್ಲಿ ಬಿಎಸ್ ಎಫ್ ನ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರ ಮುಂದೆ ಬಾಂಗ್ಲಾದೇಶ ಸರ್ಕಾರದ ತೀವ್ರ ಕಳವಳವನ್ನು ಜಾಶಿಮ್ ಉದ್ದೀನ್ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಣಯ್ ವರ್ಮಾ ಅವರು ಮಧ್ಯಾಹ್ನ ಸ್ಥಳೀಯ ಕಾಲಮಾನ 3 ಗಂಟೆ ಸುಮಾರಿಗೆ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿದರು. ವಿದೇಶಾಂಗ ಕಾರ್ಯದರ್ಶಿ ಜಾಶಿಮ್ ಉದ್ದೀನ್ ಮತ್ತು ವರ್ಮಾ ಅವರು ಸುಮಾರು 45 ನಿಮಿಷ ಸಭೆ ನಡೆಸಿದರು ಎಂದು ' ಬಿಎಸ್ ಎಸ್' ವರದಿ ಮಾಡಿತ್ತು.

ಸಭೆ ಮುಗಿಸಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣಯ್ ವರ್ಮಾ, ಭದ್ರತೆಗಾಗಿ ಗಡಿಯಲ್ಲಿ ಬೇಲಿ ನಿರ್ಮಿಸುವ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಒಪ್ಪಂದಗಳಾಗಿವೆ. ಗಡಿ ಕಾವಲು ಪಡೆಗಳಾದ ಬಿಎಸ್ ಎಫ್ ಮತ್ತು ಬಿಜಿಬಿ ( ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ) ಈ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿವೆ. ಗಡಿಯುದ್ದಕ್ಕೂ ಅಪರಾಧ ತಡೆಗಟ್ಟಲು ಇದು ಪರಸ್ಪರ ಸಹಕಾರಿ ವಿಧಾನವಾಗಿದೆ. ಈ ಒಪ್ಪಂದವನ್ನು ಕಾರ್ಯಗತಗೊಳಿಸುತ್ತೇವೆ. ಇದನ್ನು ಬಾಂಗ್ಲಾ ಕೂಡಾ ಅರ್ಥ ಮಾಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಹೇಳಿದರು.

ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿ ಭಾರತ-ಬಾಂಗ್ಲಾ ಗಡಿಯಲ್ಲಿ ಐದು ಸ್ಥಳಗಳಲ್ಲಿ ಬೇಲಿಗಳನ್ನು ನಿರ್ಮಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಢಾಕಾ ಆರೋಪಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಅಂತಹ ಚಟುವಟಿಕೆಗಳು ವಿಶೇಷವಾಗಿ ಮುಳ್ಳುತಂತಿ ಬೇಲಿಗಳನ್ನು ನಿರ್ಮಿಸುವ ಪ್ರಯತ್ನ ಮತ್ತು ಬಿಎಸ್‌ಎಫ್‌ನ ಕ್ರಮಗಳು ಗಡಿಯಲ್ಲಿ ಉದ್ವಿಗ್ನತೆ ಮತ್ತು ಗೊಂದಲಗಳಿಗೆ ಕಾರಣವಾಗಿವೆ ಎಂದು ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂತಹ ಸಮಸ್ಯೆಗಳನ್ನು ರಚನಾತ್ಮಕ ಮಾತುಕತೆ ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ, ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯುವ ರೀತಿಯಲ್ಲಿ ಪರಿಹರಿಸಬೇಕು" ಎಂದು ಬಾಂಗ್ಲಾದೇಶ ನಂಬಿಕೆ ಇಟ್ಟಿದೆ ಎಂದು ಅವರು ಹೇಳಿದ್ದಾರೆ.

Comentários


Top Stories

bottom of page