ಭಾರತದ ಆರ್ಥಿಕ ಪರಿಸ್ಥಿತಿ ಶ್ಲಾಘಿಸಿದ ರಷ್ಯಾ ಅಧ್ಯಕ್ಷ
- Ananthamurthy m Hegde
- Dec 20, 2024
- 1 min read

ಮಾಸ್ಕೋ: ಭಾರತದ ಸ್ಥಿರ ಆರ್ಥಿಕ ಪರಿಸ್ಥಿತಿ ಜಗತ್ತಿಗೆ ಮಾದರಿ. ಭಾರತದ ನಿರಂತರ ಆರ್ಥಿಕ ಪರಾಕ್ರಮ ಶ್ಲಾಘನೀಯ ಎಂದು ಎಂದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ 15ನೇ ವಿಟಿಬಿ “ರಷ್ಯಾ ಕಾಲಿಂಗ್ ಇನ್ವೆಸ್ಟ್‌ಮೆಂಟ್ ಫೋರಮ್” ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ರಷ್ಯಾದ ಆಮದು ಪರ್ಯಾಯ ಕಾರ್ಯಕ್ರಮ ಮತ್ತು ಭಾರತದ 'ಮೇಕ್ ಇನ್ ಇಂಡಿಯಾ' ಉಪಕ್ರಮದ ನಡುವೆ ಸಾಮ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಉಕ್ರೇನ್‌ನೊಂದಿಗಿನ ಸುದೀರ್ಘ ಸಂಘರ್ಷದ ಹೊರತಾಗಿಯೂ ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಸಾಮಾನ್ಯ ಮತ್ತು ಸ್ಥಿರವಾಗಿಡಲು ತಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಪುಟಿನ್ ಹೇಳಿದರು.
“ಬಾಹ್ಯ ಬೆದರಿಕೆಗಳು ಮತ್ತು ಅದರ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಹೊರತಾಗಿಯೂ, ರಷ್ಯಾದ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿದೆ. ಸಂಕಷ್ಟದ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿರತೆ ಕಾಪಾಡುವಲ್ಲಿ ಭಾರತ ನಮಗೆ ಮಾದರಿ..” ಎಂದು ಪುಟಿನ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಅವರ 'ಭಾರತ-ಮೊದಲು' ನೀತಿ ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಶ್ಲಾಘಿಸಿದ್ದ ವ್ಲಾಡಿಮಿರ್ ಪುಟಿನ್, ಭಾರತದಲ್ಲಿ ಉತ್ಪಾದನಾ ವಲಯದ ಬೆಳವಣಿಗೆಯಲ್ಲಿ ರಷ್ಯಾದ ಹೆಚ್ಚಿನ ಪಾಲುದಾರಿಕೆ ಬಯಸಿರುವುದಾಗಿ ಹೇಳಿದ್ದರು.
“ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಉಪಕ್ರಮ ನಮ್ಮನ್ನು ಬಹುವಾಗಿ ಸೆಳೆದಿದೆ. ನಾವು ಭಾರತದಲ್ಲಿ ನಮ್ಮ ಉತ್ಪಾದನಾ ಕಾರ್ಯಾಚರಣೆಗಳಿಗೆ ವೇಗ ನೀಡಲು ಸಿದ್ಧರಿದ್ದೇವೆ. ಭಾರತ ಸರ್ಕಾರವು ಸ್ಥಿರ ಆರ್ಥಿಕ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಎಂದು ನಾವು ನಂಬುತ್ತೇವೆ..” ಪುಟಿನ್ ಮೆಚ್ಚುಗೆಯ ಮಾತುಗಳನ್ನಾಡಿದರು.
ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದ ಪುಟಿನ್, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನ ಮತ್ತು ಅದರ ಬೆಳೆಯುತ್ತಿರುವ ಆರ್ಥಿಕತೆಯ ಶಕ್ತಿಯನ್ನು ಶ್ಲಾಘಿಸಿದ್ದರು.
“ನಮ್ಮ ವಿಶೇಷ ಸವಲತ್ತುಗಳ ಕಾರ್ಯತಂತ್ರದ ಪಾಲುದಾರಿಕೆಯು ವೇಗವನ್ನು ಪಡೆಯುತ್ತಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದ ಆರ್ಥಿಕ ನಾಗಾಲೋಟ ಕಂಡು ನಮಗೆ ಸಂತೋಷವಾಗಿದೆ. ಭಾರತ ಮತ್ತು ರಷ್ಯಾದ ಪಾಲುದಾರಿಕೆ ಮತ್ತಷ್ಟು ಹೆಚ್ಚಬೇಕು ಎಂಬುದು ನಮ್ಮ ಅಭಿಲಾಷೆ ಎಂದು ಪುಟಿನ್ ಹೇಳಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.
Comments