top of page

ಭಾರತದ ವಿದೇಶಾಂಗ ನೀತಿಯ ಸ್ವಾತಂತ್ರ್ಯವನ್ನು ಎಂದಿಗೂ ತಟಸ್ಥ ನೀತಿಯ ಭಾಗವಾಗಿ ನೋಡಬಾರದು: ಎಸ್.ಜೈ ಶಂಕರ್

  • Writer: Ananthamurthy m Hegde
    Ananthamurthy m Hegde
  • Dec 23, 2024
  • 2 min read
ree

ಹೊಸದಿಲ್ಲಿ: ಭಾರತವು ತನ್ನ ರಾಷ್ಟ್ರೀಯ ಹಿತಸಕ್ತಿಗೆ ಸಂಬಂಧಿಸಿದಂತೆ ಅನ್ಯರ ಒತ್ತಡವನ್ನುಎಂದಿಗೂ ಸಹಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಮಾತನಾಡಿದ ಜೈಶಂಕರ್‌, ಭಾರತದ ವಿದೇಶಾಂಗ ನೀತಿಯ ಸ್ವಾತಂತ್ರ್ಯವನ್ನು ಎಂದಿಗೂ ತಟಸ್ಥ ನೀತಿಯ ಭಾಗವಾಗಿ ನೋಡಬಾರದು ಎಂದು ಹೇಳಿದ್ದಾರೆ.

“ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಭಾರತವು ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿದೆ. ಈ ಆಯ್ಕೆಯ ಸ್ವಾತಂತ್ರ್ಯವು ಇದರ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ನಿಂತಿದೆ. ಯಾವುದೇ ಬಾಹ್ಯ ಶಕ್ತಿಯು ಭಾರತದ ಹಿತಾಸಕ್ತಿಗಳ ಮೇಲೆ ಸವಾರಿ ಮಾಡುವುದನ್ನು ನಾವು ಸಹಿಸುವುದಿಲ್ಲ..” ಎಂದು ಜೈಶಂಕರ್‌ ಖಡಕ್‌ ಆಗಿ ಹೇಳಿದ್ದಾರೆ.

“ನಮ್ಮ ರಾಷ್ಟ್ರೀಯ ಹಿತಾಸಕ್ತಿ ಮತ್ತು ಜಾಗತಿಕ ಒಳಿತಿಗಾಗಿ ನಾವು ಸರಿ ಎನಿಸಿದ ಮಾರ್ಗವನ್ನು ಆಯ್ಕೆ ಮಾಡುತ್ತೇವೆ. ಭಾರತವು ತನ್ನ ಆಯ್ಕೆಗಳ ಮೇಲೆ ಬಾಹ್ಯ ಶಕ್ತಿಗಳು ವೀಟೋ ಹೊಂದಲು ಎಂದಿಗೂ ಅನುಮತಿಸುವುದಿಲ್ಲ .ನಾವು ಪ್ರಗತಿ ಮತ್ತು ಆಧುನಿಕತೆಯನ್ನು ನಮ್ಮ ಪರಂಪರೆ ಮತ್ತು ಸಂಪ್ರದಾಯಗಳ ಭಾಗವನ್ನಾಗಿಸುವ ಶಿಕ್ಷಣವನ್ನು ಪಡೆದುಕೊಂಡಿದ್ದೇವೆ” ಎಂದರು.

“ರಾಷ್ಟ್ರೀಯ ಹಿತಾಸಕ್ತಿಯೇ ಭಾರತದ ವಿದೇಶಾಂಗ ನೀತಿಯ ಅಡಿಪಾಯ. ಈ ಹಿತಾಸಕ್ತಿಯನ್ನು ಬಲಿಕೊಡುವ ಮತ್ತು ಬಾಹ್ಯ ಶಕ್ತಿಗಳ ಅಭಿಪ್ರಾಯಗಳನ್ನು ಅನುಸರಿಸುವ ಅನಿವಾರ್ಯತೆ ಭಾರತಕ್ಕಿಲ್ಲ. ಅಂತಹ ಸನ್ನಿವೇಶ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಸಾಮರ್ಥ್ಯವನ್ನು ನಾವು ಪಡೆದುಕೊಂಡಿದ್ದೇವೆ” ಎಂದು ಜೈಶಂಕರ್‌ ಹೇಳಿದರು.

“ಭಾರತ ಒಂದು ಅಸಾಧಾರಣ ಶಕ್ತಿಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಇಲ್ಲಿನ ನಾಗರಿಕ ಸಮಾಜವು ಜಾಗತಿಕ ಮಟ್ಟದಲ್ಲಿ ತನ್ನ ಸಾಂಸ್ಕೃತಿಕ ಶಕ್ತಿಯನ್ನು ಸಂಪೂರ್ಣವಾಗಿ ಬಳಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯತೆಯನ್ನು ಕಳೆದುಕೊಳ್ಳದೇ ಆಧುನಿಕ ಪ್ರಗತಿಯತ್ತ ನಾವು ದಾಪುಗಾಲು ಹಾಕುತ್ತಿದ್ದೇವೆ..” ಎಂದು ಎಸ್.‌ ಜೈಶಂಕರ್‌ ಪ್ರತಿಪಾದಿಸಿದರು.

“ಭಾರತ ಇಂದು ನಿರ್ಣಾಯಕ ಘಟ್ಟದಲ್ಲಿದೆ. ಕಳೆದೊಂದು ದಶಕದಲ್ಲಿ ಜಗತ್ತು ನಮ್ಮ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಬದ್ಧತೆಯನ್ನು ಕಣ್ಣಾರೆ ಕಂಡಿದೆ. ಜಾಗತಿಕ ವೇದಿಕೆಯಲ್ಲಿ ಭಾರತವು ಸ್ವತಂತ್ರ ಶಕ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ..” ಎಂದು ಜೈಶಂಕರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಐದು ಖಾಯಂ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಈ ರಾಷ್ಟ್ರಗಳು ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್‌ ಕಿಂಗ್‌ಡಮ್‌ ಅಮೆರಿಕ ಆಗಿವೆ. ಪ್ರಸ್ತುತ ಕಾರ್ಯವಿಧಾನದ ನಿರ್ಧಾರಗಳನ್ನು ಹೊರತುಪಡಿಸಿ, ಯಾವುದೇ ನಿರ್ಧಾರವನ್ನು ವೀಟೋ ಮಾಡುವ ಅಧಿಕಾರವನ್ನು ಈ ಸದಸ್ಯ ರಾಷ್ಟ್ರಗಳು ಹೊಂದಿವೆ.

1945 ರಲ್ಲಿ ಸ್ಥಾಪಿತವಾದ ಯುಎನ್‌ಎಸ್‌ಸಿ, ಒಟ್ಟು 15 ಸದಸ್ಯರನ್ನು ಹೊಂದಿದೆ, ಉಳಿದ 10 ಸದಸ್ಯರು ಎರಡು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವ ಶಾಶ್ವತವಲ್ಲದ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಶಾಶ್ವತವಲ್ಲದ ಸದಸ್ಯರು ವೀಟೋ ಅಧಿಕಾರ ಚಲಾಯಿಸುವ ಹಕ್ಕನ್ನು ಹೊಂದಿಲ್ಲ.

15 ರಾಷ್ಟ್ರಗಳ ಮಂಡಳಿಯು 21ನೇ ಶತಮಾನದ ಬೇಡಿಕೆಗಳಿಗೆ ಸೂಕ್ತವಲ್ಲ ಎಂದು ಪ್ರತಿಪಾದಿಸುತ್ತಿರುವ ಭಾರತ, ಯುಎನ್‌ಎಸ್‌ಸಿ ಯ ಶಾಶ್ವತ ಮತ್ತು ಶಾಶ್ವತವಲ್ಲದ ವಿಭಾಗಗಳಲ್ಲಿ ವಿಸ್ತರಣೆ ಸೇರಿದಂತೆ ಭದ್ರತಾ ಮಂಡಳಿಯ ಸುಧಾರಣೆಗೆ ಕರೆ ನೀಡುತ್ತಿದೆ.

ಯುಎನ್‌ಎಸ್‌ಸಿ ಕಾಯಂ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಕೂಡ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿವೆ. ಆದರೆ ವೀಟೋ ಅಧಿಕಾರ ಹೊಂದಿರುವ ಮತ್ತೊಂದು ರಾಷ್ಟ್ರ ಚೀನಾ ಮಾತ್ರ ಅಪಸ್ವರ ಎತ್ತುತ್ತಲೇ ಇದೆ.


Comments


Top Stories

bottom of page