ಭಾವನಾತ್ಮಕ ಬೆಂಬಲಕ್ಕೆ ChatGPT ಮೊರೆ ಹೋಗುತ್ತಿರುವ ಜನ! ಎಚ್ಚರಿಕೆ ಅಗತ್ಯಭಾವನಾತ್ಮಕ ಬೆಂಬಲಕ್ಕೆ ChatGPT ಮೊರೆ ಹೋಗುತ್ತಿರುವ ಜನ! ಎಚ್ಚರಿಕೆ ಅಗತ್ಯ
- Ananthamurthy m Hegde
- Mar 18
- 2 min read
ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಸುಲಭ ಪ್ರವೇಶ ಮತ್ತು ಅತಿಯಾದ ಬಳಕೆಯಿಂದಾಗಿ ಜನರು ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ChatGPTಯಂತಹ ಕೃತಕ ಬುದ್ಧಿಮತ್ತೆ (artificial intelligence) ನತ್ತ ಹೆಚ್ಚು ವಾಲುತ್ತಿದ್ದಾರೆ.
ಅಚ್ಚರಿ ಎಂದರೆ ಕೆಲವೊಮ್ಮೆ ಈ ಎಐಗಳನ್ನು ಚಿಕಿತ್ಸೆಗೆ ಪರ್ಯಾಯವಾಗಿಯೂ ಸಹ ಬಳಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಬಿಸಿನೆಸ್ ಇನ್ಸೈಡರ್ (Business Insider) ವರದಿಯ ಪ್ರಕಾರ, ಅನೇಕ ವ್ಯಕ್ತಿಗಳು ತಮ್ಮ ಜೀವನ ತರಬೇತಿಗಾಗಿ, ವೈಯಕ್ತಿಕ ಸಂದಿಗ್ಧತೆಗಳನ್ನು ಬಿಚ್ಚಿಡಲು ಅಥವಾ ತಮ್ಮ ಆಲೋಚನೆಗಳನ್ನು ಪ್ರಕ್ರಿಯೆಗೊಳಿಸಲು non-judgmental space ರೂಪದಲ್ಲಿ AI ಅನ್ನು ಬಳಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ:
Reddit ಫೋರಮ್‌ಗಳಿಂದ ಟಿಕ್‌ಟಾಕ್ (TikTok) ಟ್ರೆಂಡ್‌ಗಳವರೆಗೆ, ಬಳಕೆದಾರರು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ChatGPT ಯೊಂದಿಗೆ ಹೇಗೆ ತೊಡಗಿಸಿಕೊಳ್ಳುವುದು ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ChatGPT ಉಚಿತವಾಗಿದ್ದು, ದಿನದ 24 ಗಂಟೆಯೂ ಇದರ ಸೇವೆ ಸಿಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಕಸ್ಟಮೈಸ್ ಮಾಡಿದ, ಆಳವಾದ ಸಲಹೆಗಳನ್ನು ನೀಡುತ್ತದೆ. ಇದೇ ಕಾರಣಕ್ಕೆ ಇದು ಒಂದು ಪ್ರಲೋಭನಗೊಳಿಸುವ ಪ್ರಖ್ಯಾತ ಆಯ್ಕೆಯಾಗಿದೆ.
ಪಾಕೆಟ್ ತಜ್ಞ?
ಬಿಸಿನೆಸ್ ಇನ್ಸೈಡರ್ ಸಂದರ್ಶಿಸಿದ ಖ್ಯಾತ ಮನೋವಿಜ್ಞಾನ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತೆ ರಾಚೆಲ್ ಗೋಲ್ಡ್‌ಬರ್ಗ್ ಅವರು ಈ ಬಗ್ಗೆ ಮಾತನಾಡಿದ್ದು, 'ಜನರು ಚಿಕಿತ್ಸಕ ಉದ್ದೇಶಗಳಿಗಾಗಿ AI ಅನ್ನು ಬಳಸುತ್ತಾರೆ ಎಂದು ಕೇಳಿದಾಗ ತನಗೆ ಆಶ್ಚರ್ಯವಾಗಲಿಲ್ಲ. ಏಕೆಂದರೆ ತನ್ನ ಕ್ಲೈಂಟ್ ಕೂಡ ಆ ಪಟ್ಟಿಯಲ್ಲಿದ್ದರು. ಆ ಬಗ್ಗೆ ನಾನು ಅಕೆಯಲ್ಲಿ ವಿಚಾರಿಸಿದಾಗ, "ದಿನವಿಡೀ ಸಮಯ ಕಳೆಯಲು ನನಗೆ ಸಹಾಯ ಮಾಡುವ ಸಣ್ಣ ದಿಕ್ಸೂಚಿ"ಯಾಗಿದೆ ಎಂದು ಆಕೆ ವಿವರಿಸಿದ್ದರು. ಅಲ್ಲದೆ ತನ್ನ ಗೊಂದಲಗಳಿಗೆ ಪರಿಹಾರ ಪಡೆಯಲು ತನ್ನ ಸ್ನೇಹಿತರು ಅಥವಾ ಚಿಕಿತ್ಸಕರ ಮೊರೆ ಹೋಗುವುದಕ್ಕಿಂತ ಸುಲಭವಾಗಿ ಎಐ ತ್ವರಿತವಾಗಿ ಪ್ರಕ್ರಿಯೆಗೊಳಿಸಬಹುದು ಎಂದು ಆಕೆ ಹೇಳಿಕೊಂಡಿದ್ದಳು. ಆಕೆಯ ಮಾತು ಎಐ ಆಕೆ ಸ್ವತಃ ಗಮನಿಸದೇ ಇರುವ ಭಾವನಾತ್ಮಕ ಮಾದರಿಗಳಲ್ಲಿ ಒಂದಾಗಿದೆ ಎಂಬುದು ನನ್ನ ಗಮನಕ್ಕೆ ಬಂತು ಎಂದು ಹೇಳಿದ್ದಾರೆ.
ಅನೇಕ ಬಳಕೆದಾರರಿಗೆ, ಈ ಅನುಕೂಲವು ChatGPT ಯ ಅತಿದೊಡ್ಡ ಆಕರ್ಷಣೆಯಾಗಿದ್ದು, ಅಪಾಯಿಂಟ್‌ಮೆಂಟ್‌ಗಳು ಮತ್ತು ಆರ್ಥಿಕ ಹೂಡಿಕೆಯ ಅಗತ್ಯವಿರುವ ಸಾಂಪ್ರದಾಯಿಕ ಸಲಹೆಗಳಿಗಿಂತ ಭಿನ್ನವಾಗಿ, AI ಸಲಹೆಯು ಯಾವಾಗಲೂ ಯಾವುದೇ ವೆಚ್ಚವಿಲ್ಲದೆ ಸುಲಭವಾಗಿ ಲಭ್ಯವಾಗುತ್ತದೆ. ಬಳಕೆದಾರರು ಕಾಯದೆ ತಕ್ಷಣದ ದೃಢೀಕರಣ, ಒಳನೋಟ ಮತ್ತು ಬೆಂಬಲವನ್ನು ಪಡೆಯಬಹುದು ಎಂದು ರಾಚೆಲ್ ಗೋಲ್ಡ್‌ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.
ಎಚ್ಚರಿಕೆ ಅತ್ಯಗತ್ಯ
ಇಷ್ಟೆಲ್ಲಾ ಪ್ರಯೋಜನಗಳ ಹೊರತಾಗಿಯೂ, ಮಾನಸಿಕ ಆರೋಗ್ಯ ತಜ್ಞರು ಭಾವನಾತ್ಮಕ ಬೆಂಬಲಕ್ಕಾಗಿ AI ಅನ್ನು ಅತಿಯಾಗಿ ಅವಲಂಬಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ChatGPT ಯ ಮಿತಿಯಿಲ್ಲದ ಬಳಕೆಯು ಅತಿಯಾದ ಭರವಸೆ-ಕೋರಿಕೆಯಂತಹ ಅನಾರೋಗ್ಯಕರ ನಡವಳಿಕೆಗಳನ್ನು ಬಲಪಡಿಸಬಹುದು. ಪ್ರಮುಖವಾಗಿ ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) ನಂತಹ ಸಮಸ್ಯೆ ಹೊಂದಿರುವ ಜನರಿಗೆ, ChatGPT ಭಾವನಾತ್ಮಕ ಸ್ಥಿತಿಸ್ಥಾಪಕತ್ವವನ್ನು ಪ್ರೋತ್ಸಾಹಿಸುವ ಬದಲು ನಿರಂತರವಾಗಿ ದೃಢೀಕರಣವನ್ನು ಒದಗಿಸುವ ಮೂಲಕ ಉದ್ದೇಶಪೂರ್ವಕವಲ್ಲದೇ ರೋಗಲಕ್ಷಣಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.
ತರಬೇತಿ ಪಡೆದ ತಜ್ಞರಿಗಿಂತ ಭಿನ್ನವಾಗಿ, AI ದೀರ್ಘಕಾಲೀನ ನಡವಳಿಕೆಯ ಮಾದರಿಗಳನ್ನು ಪರಿಶೀಲನೆ ಮಾಡುವುದಿಲ್ಲ ಅಥವಾ ಹಾನಿಕಾರಕ ಆಲೋಚನಾ ಪ್ರಕ್ರಿಯೆಗಳನ್ನು ಸವಾಲು ಮಾಡುವುದಿಲ್ಲ. ಇದಲ್ಲದೆ, ChatGPT ಯ ಹೊಂದಿಕೊಳ್ಳುವಿಕೆ ನೈತಿಕ ಕಾಳಜಿಗಳನ್ನು ಹುಟ್ಟುಹಾಕುತ್ತದೆ. ಬಳಕೆದಾರರು ತಮ್ಮ ಪಕ್ಷಪಾತೀಯ ನಡೆಯೊಂದಿಗೆ ಹೊಂದಿಕೊಳ್ಳಲು AI ಯ ಪ್ರತಿಕ್ರಿಯೆಗಳನ್ನು ತಿರುಚಬಹುದು ಎಂದು Business Insider ವರದಿ ಗಮನಿಸಿದೆ.
ಉದಾಹರಣೆಗೆ ಓರ್ವ ವ್ಯಕ್ತಿ ಆರಂಭದಲ್ಲಿ ತಟಸ್ಥ ಪ್ರತಿಕ್ರಿಯೆ ಪಡೆಯುವ ಉತ್ತರ ಪಡೆದರೆ, ಇದಕ್ಕೆ ತದ್ವಿರುದ್ಧ ಉತ್ತರ ಬರುವಂತೆ ಪ್ರಶ್ನೆಗಳನ್ನು ಸರಿ ಹೊಂದಿಸಬಹುದು. ಸಾಮಾನ್ಯವಾಗಿ ಎಐಗಳು ಎರಡೂ ಉತ್ತರಗಳಿಗೆ ತನ್ನನ್ನು ತೆರೆದುಕೊಂಡಿರುತ್ತದೆ. ಹೀಗಾಗಿ ಈ ಎಐಗಳ ಮೇಲೆ ಅವಲಂಬನೆ ಸಲ್ಲ ಎಂದು ತಜ್ಞರು ಹೇಳಿದ್ದಾರೆ.
ಮಾನವ ಸ್ಪರ್ಶ
ಭಾವನಾತ್ಮಕ ಬೆಂಬಲಕ್ಕಾಗಿ ChatGPT ಯನ್ನು ನಿಯಮಿತವಾಗಿ ಬಳಸುವವರು ಸಹ ಅದರ ಮಿತಿಗಳನ್ನು ಒಪ್ಪಿಕೊಳ್ಳುತ್ತಾರೆ. ಸಾಂಪ್ರದಾಯಿಕ ಚಿಕಿತ್ಸೆಯೊಂದಿಗೆ ಬರುವ ಮಾನವ ಸ್ಪರ್ಶವನ್ನು AI ಹೊಂದಿರುವುದಿಲ್ಲ. ನಿಜ ಜೀವನದ ಚಿಕಿತ್ಸಕರು ಅಥವಾ ತಜ್ಞರು, ಸ್ನೇಹಿತರು ವೈಯಕ್ತಿಕ ಸಲಹೆಗಳು, ಹಾಸ್ಯ ಮತ್ತು ಸೂಕ್ಷ್ಮ ತಿಳುವಳಿಕೆಯನ್ನು ತರುತ್ತಾರೆ. ಆದರೆ ChatGPT, ಅದರ ಮುಂದುವರಿದ ಭಾಷಾ ಸಾಮರ್ಥ್ಯಗಳ ಹೊರತಾಗಿಯೂ, ಪುನರಾವರ್ತಿಸಲು ಸಾಧ್ಯವಾಗದ ವಿಷಯಗಳು ಸಾಕಷ್ಟು ಇವೆ ಎಂದು ಬಳಕೆದಾರರು ತಿಳಿದುಕೊಂಡಿದ್ದಾರೆ.
ಖಾಸಗಿತನ
ಈ ಎಐಗಳ ಮತ್ತೊಂದು ಪ್ರಮುಖ ಕಾಳಜಿ ಎಂದರೆ ಅದು ಡೇಟಾ ಗೌಪ್ಯತೆ. ChatGPT ತ್ವರಿತ ಪ್ರತಿಕ್ರಿಯೆಯನ್ನು ಒದಗಿಸಿದರೂ, ಅದು ಪರವಾನಗಿ ಪಡೆದ ಅಥವಾ ನುರಿತ ತಜ್ಞರಂತೆ ಗೌಪ್ಯತೆಯನ್ನು ನೀಡುವುದಿಲ್ಲ. AI-ರಚಿತ ಪ್ರತಿಕ್ರಿಯೆಗಳು ವಿಶಾಲವಾದ ಡೇಟಾ ಸೆಟ್‌ಗಳನ್ನು ಆಧರಿಸಿವೆ ಮತ್ತು ಬಳಕೆದಾರ ಡೇಟಾವನ್ನು ದೀರ್ಘಕಾಲದವರೆಗೆ ಸಂಗ್ರಹಿಸಲಾಗುವುದಿಲ್ಲ ಎಂದು ChatGPT ನಿರ್ಮಾತೃ ಸಂಸ್ಥೆ OpenAI ಹೇಳಿದೆ. ಆದಾಗ್ಯೂ ಭವಿಷ್ಯದಲ್ಲಿ ಮಾಹಿತಿಯನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಇನ್ನೂ ಅನಿಶ್ಚಿತತೆಯಿದೆ.
AI ಚಿಕಿತ್ಸೆ ಮತ್ತು ಅದರ ಗಡಿ
ಮಾನಸಿಕ ಆರೋಗ್ಯ ತಜ್ಞರು ಸ್ಪಷ್ಟ ಗಡಿಗಳೊಂದಿಗೆ ಮಾತ್ರ AI ಉಪಯುಕ್ತ ಸಾಧನವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಳವಾದ ಭಾವನಾತ್ಮಕ ಪ್ರಕ್ರಿಯೆಗೆ ಬದಲಾಗಿ, ಕೆಲಸದ ಸ್ಥಳದ ಸಂವಹನ ಅಥವಾ ವಿಶ್ರಾಂತಿ ತಂತ್ರಗಳ ಕುರಿತು ಸಲಹೆಯಂತಹ ನಿರ್ದಿಷ್ಟ, ಕಡಿಮೆ-ಅಪಾಯದ ವಿಚಾರಗಳಿಗಾಗಿ ಮಾತ್ರ ChatGPT ಬಳಸಲು ತಜ್ಞರು ಸೂಚಿಸುತ್ತಾರೆ.
ಬದಲಾದ ಸನ್ನಿವೇಶದಲ್ಲಿ AI ಮನುಷ್ಯನ ಜೀವನದಲ್ಲಿ ಅದರದ್ದೇ ಆದ ಸ್ಥಾನವನ್ನು ಹೊಂದಿದೆಯಾದರೂ, ಅದು ಮಾನವ ಸಂಪರ್ಕವನ್ನು ಬದಲಾಯಿಸಲು ಸಾಧ್ಯವಿಲ್ಲ. 'ಕೃತಕ ಬುದ್ಧಿಮತ್ತೆ ಶಕ್ತಿಶಾಲಿಯಾಗಿದ್ದರೂ, ಅದು ಮಾನವನ ಕಲ್ಪನಾ ಶಕ್ತಿಗೆ ಸರಿಸಾಟಿಯಾಗಲು ಎಂದಿಗೂ ಸಾಧ್ಯವಾಗುವುದಿಲ್ಲ' ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಮಾತು ಇಲ್ಲಿ ಸ್ಮರಣೀಯ..
Commentaires