ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆ ವೈದ್ಯ ವಿಕ್ರಂ ಶೆಟ್ಟಿ ಅಭಿಪ್ರಾಯ ವೈದ್ಯಕೀಯ ಶಿಬಿರ ಆಯೋಜಿಸಿರುವುದು ಸ್ಥಳೀಯ ಜನತೆಗೆ ಅನುಕೂಲ
- Ananthamurthy m Hegde
- Nov 25, 2024
- 1 min read
ಭಟ್ಕಳ:ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಹಾಗೂ ತಾಲ್ಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಏರ್ಪಡಿಸಲಾದ ವೈದ್ಯಕೀಯ ಶಿಬಿರವನ್ನು ಕೆ ಎಸ್ ಹೆಗ್ಡೆ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ. ವಿಕ್ರಮ್ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೆ ಎಸ್ ಹೆಗ್ಡೆ ಆಸ್ಪತ್ರೆ 1200 ಹಾಸಿಗೆಯ ಬೃಹತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಇಲ್ಲಿ ಕಡಿಮೆ ದರದಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅನುಕೂಲವಾಗಲು ಆಸ್ಪತ್ರೆಯಿಂದ ಹಲವು ವೈದ್ಯಕೀಯ ಶಿಬಿರ ಏರ್ಪಡಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಜನತೆ ಪಡೆಯಬೇಕು. ಆಸ್ಪತ್ರೆಯಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ವಿಮಾ ಯೋಜನೆ ಇದ್ದು, ಜನತೆ ಇದರ ಸದುಪಯೋಗವನ್ನೂ ಕೂಡ ಪಡೆಯಬಹುದಾಗಿದೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಮ್ಮ ಆಸ್ಪತ್ರೆಯ ವೈದ್ಯಕೀಯ ಶಿಬಿರ ಆಯೋಜಿಸಿರುವುದು ಸ್ಥಳೀಯ ಜನತೆಗೆ ಅನುಕೂಲವಾಗಿದೆ ಎಂದರು.
ಉಪಸ್ಥಿತರಿದ್ದ ಸರಕಾರಿ ಆಸ್ಪತ್ರೆಯ ಪಿಜಿಷಿಯನ್ ಡಾ. ಲಕ್ಷ್ಮೀಶ ನಾಯ್ಕ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ಕೆ ಎಸ್ ಹೆಗ್ಡೆ ಆಸ್ಪತ್ರೆಯವರು ವೈದ್ಯಕೀಯ ಶಿಬಿರ ಏರ್ಪಡಿಸಿರುವುದು ಇಲ್ಲಿನ ಜನತೆಗೆ ಅನುಕೂಲವಾಗಿದೆ. ಕೆ ಎಸ್ ಹೆಗ್ಡೆ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಉತ್ತಮ ಆಸ್ಪತ್ರೆ ಆಗಿದೆ . ಭಟ್ಕಳ ಪತ್ರರ್ಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕ್ರಿಯಾಶೀಲ ಗೆಳೆಯರ ಸಂಘ ನೇತೃತ್ವದಲ್ಲಿ ಅರ್ಥೋಗೆ ಸಂಬಂಧಿಸಿದ ವೈದ್ಯಕೀಯ ಶಿಬಿರ ನಡೆಸಿರುವುದು ಜನರು ಇದರ ಸದುಪಯೋಗ ಪಡೆಯಲು ಅನುಕೂಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವೈದ್ಯರಾದ ಡಾ. ವಿಕ್ರಂ ಶೆಟ್ಟಿ, ಲಕ್ಷ್ಮೀಶ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಉಪಾಧ್ಯಕ್ಷ ವಿಷ್ಣು ದೇವಡಿಗ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯ್ಕ, ಕೆ ಎಸ್ ಹೆಗ್ಡೆ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಜೈಸನ್ ಇದ್ದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಖಚಾಂಚಿ ಮೋಹನ ನಾಯ್ಕ ಸ್ವಾಗತಸಿ, ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರು ಪಾಲ್ಗೊಂಡಿದ್ದು, ತಾಲ್ಲೂಕಿನ ವಿವಿಧ ಭಾಗದ 200ಕ್ಕೂ ಅಧಿಕ ಜನರು ಪಾಲ್ಗೊಂಡು ವೈದ್ಯರಿಂದ ತಪಾಸಿಸಿಕೊಂಡರು.















Comments