ಮುಂಬೈ ಕ್ಯಾಪ್ಟನ್ ಆಯ್ಕೆಯನ್ನು ಗೇಲಿ ಮಾಡಿದ ಆರ್‌ಸಿಬಿ!
- Ananthamurthy m Hegde
- Mar 22
- 1 min read
ಐಪಿಎಲ್ 2025 ಶುರುವಾಗುವ ಮುಂಚೆಯೇ ಆರ್‌ಸಿಬಿ ತಂಡವು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದೆ. ಕಳೆದ ವರ್ಷ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಟ್ಟಿದ್ದ ಆರ್‌ಸಿಬಿ ಇದೀಗ ರಜತ್ ಪಾಟೀದಾರ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ರಜತ್ ಪಾಟೀದಾರ್ ಅವರನ್ನು ನಾಯಕರಾಗಿ ನೇಮಕ ಮಾಡುವ ವೇಳೆ ಅವರಿಗೆ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಶುಭ ಕೋರಿದ್ದರು. ಇದನ್ನೇ ಇಟ್ಟುಕೊಂಡು ಮಿ. ನ್ಯಾಗ್ಸ್ ಮುಂಬೈ ತಂಡದ ಕಾಲೆಳೆದಿದ್ದಾರೆ. ಇದೀಗ ಐಪಿಎಲ್‌ಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕಿಡಿ ಹೊತ್ತಿಸಿದೆ.

ಹಾರ್ದಿಕ್ ಪಾಂಡ್ಯಾ ಕಳೆದ ವರ್ಷ ಗುಜರಾತ್ ಟೈಟಾನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಮರಳಿದಿದ್ದರು. ಈ ವೇಳೆ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ರೋಹಿತ್ ಶರ್ಮಾ ಅವರನ್ನು ನಾಯಕತ್ವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಇದು ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ.
ಹಾರ್ದಿಕ್ ಮತ್ತು ರೋಹಿತ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳೂ ಹೊರಬಿದ್ದಿದ್ದವು. ಇದು ತಂಡದೊಳಗೆ ಬಿರುಕು ಮೂಡಲು ಕಾರಣವಾಗಿತ್ತು. ರೋಹಿತ್ ಶರ್ಮಾ ಜಾಗಕ್ಕೆ ನೇಮಕವಾದ ಹಾರ್ದಿಕ್ ಪಾಂಡ್ಯಾ ವಿರುದ್ಧ ಅಭಿಮಾನಿಗಳು ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದೂ ನಡೆಯಿತು.
ಆರ್‌ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಇದನ್ನೇ ಇಟ್ಟುಕೊಂಡು ಮಿ. ನ್ಯಾಗ್ಸ್, "ರಜತ್, ನೀವು ನಾಯಕರಾಗಿದ್ದೀರಿ, ಆರ್‌ಸಿಬಿಯ ಎಲ್ಲಾ ಮಾಜಿ ನಾಯಕರು ನಿಮಗೆ ಬೆಂಬಲ ನೀಡಿದ್ದಾರೆ. ವಿರಾಟ್ ಸಂದೇಶ ಕಳುಹಿಸಿದ್ದಾರೆ, ಫಾಫ್ ಸಂದೇಶ ಕಳುಹಿಸಿದ್ದಾರೆ. ಬೇರೆ ತಂಡಗಳು ನಾಯಕತ್ವವನ್ನು ಘೋಷಿಸುವಾಗ ಇದೇ ರೀತಿಯ ತಂತ್ರವನ್ನು ಅನುಸರಿಸಬೇಕೆಂದು ನೀವು ಭಾವಿಸುತ್ತೀರಾ?" ಎಂದು ರಜತ್ ಪಾಟೀದಾರ್‌ಗೆ ಕೇಳಿದ್ದಾರೆ.
ಇದಕ್ಕೆ ಜಾಣತನದಿಂದ ಉತ್ತರಿಸಿದ ರಜತ್ ಪಾಟೀದಾರ್, "ಕ್ಷಮಿಸಿ, (ಬೇರೆ ತಂಡದಲ್ಲಿ) ಏನಾಗುತ್ತಿದೆ ಮತ್ತು ಏನಾಗುತ್ತಿಲ್ಲ ಎಂಬುದನ್ನು ನಾನು ಗಮನಿಸುವುದಿಲ್ಲ" ಎಂದು ಹೇಳಿದ್ದಾರೆ.
ಆಗ ಮಿ. ನ್ಯಾಗ್ಸ್ ಮತ್ತೆ ವ್ಯಂಗ್ಯವಾಗಿ, "ಓಹ್, ಎಷ್ಟೊಂದು ಮುಗ್ಧ ರಜತ್. ನಿಮಗೆ ನಿಜವಾಗಿಯೂ ಗೊತ್ತಿಲ್ಲವೇ? ಹಾಗಾದರೆ ನೀವು ಏಕೆ ನಗುತ್ತಿದ್ದೀರಿ? ನೋಡಿ, ಅವರು 'ಮೈ (ಎಂಐ) ನಹೀ ಸಮ್ಜಾ'ಮೈ' ಎಂದು ಹೇಳಿದರು" ಎಂದಿದ್ದಾರೆ.
ಮಿ. ನ್ಯಾಗ್ಸ್ ಹಾಗೂ ರಜತ್ ಪಾಟೀದಾರ್ ನಡುವಿನ ಈ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾರ್ದಿಕ್ ಪಾಂಡ್ಯ ಹಾಗೂ ಮುಂಬೈ ಪಾಲಿಗೆ ಕಳೆದ ಸೀಸನ್ ಅಷ್ಟೇನೂ ಉತ್ತಮವಾಗಿರಲಿಲ್ಲ. ಐದು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ತಂಡ 10 ತಂಡಗಳಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಅಲ್ಲದೆ ತವರು ಅಭಿಮಾನಿಗಳೇ ಮುಂಬೈ ವಿರುದ್ಧ ತಿರುಗಿ ಬಿದ್ದಿದ್ದರು.
Comments