top of page

ಮುಂಬರುವ ವಾರ ಡಾ.ಅಂಬೇಡ್ಕರ್ ಸಮ್ಮಾನ್ ಸಪ್ತಾಹ

  • Writer: Ananthamurthy m Hegde
    Ananthamurthy m Hegde
  • Dec 22, 2024
  • 1 min read
ree

ನವದೆಹಲಿ: ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಒಂದು ವಾರ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಿದೆ ಎಂದು ಪಕ್ಷದ ಮುಖಂಡರು ಶನಿವಾರ ತಿಳಿಸಿದ್ದಾರೆ.

ಅಂಬೇಡ್ಕರ್ ಸಮ್ಮಾನ್ ಸಪ್ತಾಹದ ಅಂಗವಾಗಿ ಬಿ.ಆರ್.ಅಂಬೇಡ್ಕರ್ ಅವರ ಪರಂಪರೆಯನ್ನು ಸ್ಮರಿಸುವುದರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅಮಿತ್ ಶಾ ವಿರುದ್ಧ ಪ್ರತಿಭಟನಾ ಮೆರವಣಿಗೆ ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿದ ಹೇಳಿಕೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಗ್ವಾದ ನಡೆದಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಾತನಾಡಿ, ಪಕ್ಷದ ಸಂಸದರು ಮತ್ತು ಮುಖಂಡರು ಡಿಸೆಂಬರ್ 22 ಮತ್ತು 23 ರಂದು ದೇಶಾದ್ಯಂತ 150 ಸ್ಥಳಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಮತ್ತು ಡಿಸೆಂಬರ್ 24 ರಂದು ದೇಶಾದ್ಯಂತ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಿದ್ದಾರೆ ಎಂದರು.

"ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ನಮ್ಮ ಆಂದೋಲನ ಮುಂದುವರಿಯುತ್ತದೆ. ಮನುಸ್ಮೃತಿ ಆರಾಧಕರ ವಿರುದ್ಧ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಂಪರೆಯನ್ನು ರಕ್ಷಿಸಲು ನಾವು ಹೋರಾಡುತ್ತೇವೆ" ಎಂದು ವೇಣುಗೋಪಾಲ್ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಮುಂಬರುವ ವಾರವನ್ನು ಡಾ.ಅಂಬೇಡ್ಕರ್ ಸಮ್ಮಾನ್ ಸಪ್ತಾಹ ಎಂದು ಗುರುತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

“ಡಿಸೆಂಬರ್ 24 ರಂದು, ನಾವು ದೇಶಾದ್ಯಂತ ಬಾಬಾಸಾಹೇಬ್ ಅಂಬೇಡ್ಕರ್ ಸಮ್ಮಾನ್ ಮೆರವಣಿಗೆಗಳನ್ನು ನಡೆಸುತ್ತೇವೆ ಮತ್ತು ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

Comments


Top Stories

bottom of page