ರಾಜ್ಯ ಬೇಕಾಬಿಟ್ಟಿ ಸಾಲ ಮಾಡಿಲ್ಲ: ಪ್ರತಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ
- Ananthamurthy m Hegde
- Mar 14
- 2 min read
ವಿಧಾನಸಭೆ : ಆರ್ಥಿಕ ಹೊಣೆಗಾರಿಕೆ ಕಾಯ್ದೆ ಅಡಿಯಲ್ಲೇ ರಾಜ್ಯ ಸರ್ಕಾರ ಸಾಲ ಪಡೆಯುತ್ತಿದ್ದು, ಕೇಂದ್ರ ಸರ್ಕಾರದಂತೆ ನಾವು ಬೇಕಾಬಿಟ್ಟಿಯಾಗಿ ಸಾಲ ಪಡೆದು ಆಡಳಿತ ನಡೆಸುತ್ತಿಲ್ಲ. ರಾಜ್ಯ ಬಜೆಟ್ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸರ್ಕಾರ ರಾಜ್ಯವನ್ನು ಸಾಲದಲ್ಲಿ ಮುಳುಗಿಸುತ್ತಿದೆ ಎಂಬ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ತಿರುಗೇಟು ನೀಡಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಸಾಲ ಪಡೆಯುವ ಮೇಲೆ ನಿಯಂತ್ರಣ ಹೇರಲು ಜಾರಿಗೊಳಿಸಲಾಗಿರುವ ಆರ್ಥಿಕ ಹೊಣೆಗಾರಿಕೆ ಕಾಯಿದೆ ಅನ್ವಯ ಮಾನದಂಡದ ಅಡಿಯಲ್ಲೇ ರಾಜ್ಯ ಬಜೆಟ್ ರೂಪಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಕೊರತೆ ಬಜೆಟ್ ಮಂಡಿಸಬಾರದು, ಹಣಕಾಸು ಕೊರತೆ ಹಾಗೂ ಸಾಲದ ಮಿತಿ ರಾಜ್ಯದ ಜಿಡಿಪಿಯ ಶೇ.25ಕ್ಕಿಂತ ಕಡಿಮೆ ಪ್ರಮಾಣದ ಸಾಲ ಪಡೆಯಬೇಕು ಎಂಬ ಮಾನದಂಡವಿದೆ. ಅದರಲ್ಲಿ ಈ ಬಾರಿ ಕೊರತೆ ಬಜೆಟ್ ಮಂಡಿಸಲಾಗಿದೆ. ಅದನ್ನು ಹೊರತುಪಡಿಸಿದರೆ ಉಳಿದೆರಡು ಅಂಶಗಳನ್ನು ಪಾಲಿಸಲಾಗಿದೆ. ಹಣ ಕಾಸು ಕೊರತೆ ಶೇ.2.91ರಷ್ಟಿದೆ ಹಾಗೂ ರಾಜ್ಯದ ಜಿಡಿ ಪಿಗಿಂತ ಶೇ.24.95ರಷ್ಟು ಸಾಲ ಪಡೆಯಲಾಗುತ್ತಿದೆ. ಇನ್ನು ಬಂಡವಾಳ ವೆಚ್ಚವನ್ನು 56 ಸಾವಿರ ಕೋಟಿ ರು. ಗಳಿಂದ 83 ಸಾವಿರ ಕೋಟಿ ರು.ಗೆ ಹೆಚ್ಚಿಸಿದ್ದೇವೆ. ವಿರೋಧ ಪಕ್ಷಗಳು ಸುಮ್ಮನೆ ಟೀಕೆ ಮಾಡುವುದನ್ನು ಬಿಟ್ಟು, ಜನರಿಗೆ ಸತ್ಯ ಹೇಳಲಿ ಎಂದರು.
ಭಂಡತನ ಬಿಡಿ: ಮುಖ್ಯಮಂತ್ರಿ ಅವರ ಉತ್ತರದಿಂದ ತೃಪ್ತರಾಗದೆ ಗದ್ದಲ ಉಂಟು ಮಾಡಲು ಮುಂದಾದ ವಿರೋಧ ಪಕ್ಷದ ಶಾಸಕರಿಗೆ, ನಮ್ಮ ಸಾಲದ ಬಗ್ಗೆ ಮಾತನಾಡುತ್ತಿದ್ದೀರಿ, ಕೇಂದ್ರ ಸರ್ಕಾರದ ಸಾಲ ಎಷ್ಟಿದೆ ಹೇಳಲಾ ಎಂದು ಸಿದ್ದರಾಮಯ್ಯ ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದೀರಿ, ಕಳೆದ 11 ವರ್ಷದಲ್ಲಿ ಸಾಲದ ಪ್ರಮಾಣ 201 ಲಕ್ಷ ಕೋಟಿ ರು.ಗೆ ಹೆಚ್ಚಳ ಮಾಡಿದ್ದಾರೆ. ಅದೇ 2014ರಲ್ಲಿ ದೇಶದ ಸಾಲ 53 ಲಕ್ಷ ಕೋಟಿಯಷ್ಟಿತ್ತು ಎಂದು ಹೇಳಿದರು.
ಕೇಂದ್ರ ಸರ್ಕಾರ 2025-26ನೇ ಸಾಲಿಗೆ 50 ಲಕ್ಷ ಕೋಟಿ ರು.ಗಳಷ್ಟು ಬಜೆಟ್ ಮಂಡಿಸಲಾಗಿದೆ. ಅದರಲ್ಲಿ ದೇಶದ ಜಿಡಿಪಿಯ ಶೇ.56ರಷ್ಟು ಸಾಲ ಮಾಡುವುದಾಗಿ ಹೇಳಲಾಗಿದೆ. ಅಲ್ಲದೆ, ಈ ವರ್ಷವೇ 15 ಲಕ್ಷ ಕೋಟಿ ರು.ಗಳನ್ನು ಸಾಲ ಮಾಡಲಾಗಿದೆ. ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಆಡಳಿತ, ಆರ್ಥಿಕ ಕ್ರಮಗಳನ್ನು ಪಾರದರ್ಶಕವಾಗಿ ಹೇಳಬೇಕು ಮತ್ತು ಭಂಡತನವನ್ನು ಬಿಡಬೇಕು ಎಂದರು.
ಕೂಗಾಡಿದರೆ ವಿಚಲಿತನಾಗಲ್ಲ: ಕೇಂದ್ರ ಸರ್ಕಾರದ ಬಜೆಟ್ ಕುರಿತು ಟೀಕೆ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಶಾಸಕರು ಮುಗಿಬಿದ್ದರು. ಡಾ.ಅಶ್ವತ್ಥನಾರಾ ಯಣ ಸೇರಿ ಇತರರು ಏರುಧ್ವನಿ ಯಲ್ಲಿ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿ ಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಏರುಧ್ವನಿಯಲ್ಲಿ ಮಾತನಾಡಿ, ಕೂಗಾಡಿದರೆ ನಾನು ವಿಚಲಿತನಾಗುವುದಿಲ್ಲ. ಜೋರಾಗಿ ಮಾತನಾಡಿದರೆ ಬಗ್ಗುವುದಿಲ್ಲ. ರಾಜ್ಯದ ಜನರಿಗೆ ಸತ್ಯ ತಿಳಿಸುತ್ತೇನೆ ಎಂದರು.
ಸಂಸತ್‌ಗೆ ಹೋಗಿ ಚರ್ಚಿಸಿ: ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್ ಕುರಿತ ಟೀಕಿಸಿದಕ್ಕೆ ಆರ್.ಅಶೋಕ್ ಪ್ರತಿಕ್ರಿಯಿಸಿ, ನಾವು ರಾಜ್ಯ ಸರ್ಕಾರದ ಬಜೆಟ್ ಕುರಿತು ಚರ್ಚಿಸುತ್ತಿದ್ದೇವೆ. ಕೇಂದ್ರ ಬಜೆಟ್ ಬಗ್ಗೆ ಮಾತನಾಡಬೇಕಾದರೆ ಮುಂದೆ ಲೋಕಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿ ವ್ಯಂಗ್ಯವಾಡಿದರು. ಎಂದು ಅದಕ್ಕೆ ಸಿದ್ದರಾಮಯ್ಯ,ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ವಾರ್ಷಿಕ 4.50 ಲಕ್ಷ ಕೋಟಿ ತೆರಿಗೆಯನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಅವರು 253 ಸಾವಿರ ಕೋಟಿ ವಾಪಸ್ ನೀಡುತ್ತಿದ್ದಾರೆ. ಹೀಗಾಗಿ ನಾವು ಕೊಟ್ಟ ತೆರಿಗೆ ಏನು ಮಾಡಲಾಗುತ್ತಿದೆ? ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ ಎಂಬುದನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಪ್ರತಿಕ್ರಿಯೆ ನಂತರ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಷ್ಟ್ರರಾಜಕಾರಣಕ್ಕೆ ಹೋಗುವುದಿಲ್ಲ. ರಾಜ್ಯದಲ್ಲೇ ಅವರು ಇರುತ್ತಾರೆ ಎಂದರು.















Comments