top of page

ರಾಜ್ಯದಲ್ಲಿ ಮೂರು ಕೇಂದ್ರೀಯ ವಿದ್ಯಾಲಯ ೧ ನವೋದಯ ವಿದ್ಯಾಲಯ ಸ್ಥಾಪನೆಗೆ ಅನುಮೋದನೆ

  • Writer: Ananthamurthy m Hegde
    Ananthamurthy m Hegde
  • Dec 7, 2024
  • 1 min read

ree

ಹೊಸದಿಲ್ಲಿ : ದೇಶಾದ್ಯಂತ 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಈ ಮೂಲಕ ದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿಯತ್ತ ಮಹತ್ತರ ಹೆಜ್ಜೆ ಇರಿಸಿದೆ ಎಂದು ಜೋಶಿ ಬಣ್ಣಿಸಿದ್ದಾರೆ.

 ದೇಶಾದ್ಯಂತ ಒಟ್ಟು 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ₹5872.08 ಕೋಟಿ ರೂಪಾಯಿ ಮೀಸಲಿರಿಸಿದೆ. ರಾಜ್ಯದ ಶಿವಮೊಗ್ಗದಲ್ಲಿ ಇರುವ ಕೇಂದ್ರೀಯ ವಿದ್ಯಾಲಯದ ವಿಸ್ತರಣೆ ಒಳಗೊಂಡಂತೆ ಹೊಸ ವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು ಎಂದು ತಿಳಿಸಿದ್ದಾರೆ.

85 ಕೇಂದ್ರೀಯ ವಿದ್ಯಾಲಯಗಳ ಪೈಕಿ ರಾಜ್ಯದಲ್ಲಿ ಮೂರು ಮತ್ತು 28 ನವೋದಯ ವಿದ್ಯಾಲಯಗಳ ಪೈಕಿ ಒಂದು ರಾಜ್ಯದಲ್ಲಿ ತೆರೆಯಲು, ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಯಾದಗಿರಿ ಜಿಲ್ಲೆಯ ಯದ್ನಾಳ್, ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಲ್ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಈಳರ್ಗಿ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭವಾಗಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ನವೋದಯ ವಿದ್ಯಾಲಯ ತೆರೆಯಲಾಗುತ್ತದೆ ಎಂದು ಕೇಂದ್ರ ವಾರ್ತಾ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ದೇಶದಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಯಿಂದ ಭಾರತದಾದ್ಯಂತ ಮಕ್ಕಳ ಶಿಕ್ಷಣಕ್ಕೆ ಮತ್ತಷ್ಟು ಅವಕಾಶ ಲಭ್ಯವಾಗಲಿದೆ ಎಂದು ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಆವರ್ತನೆಯಲ್ಲಿಲ್ಲದ ಜಿಲ್ಲೆಗಳಲ್ಲಿ 28 ಹೊಸ ನವೋದಯ ವಿದ್ಯಾಲಯಗಳ ಸ್ಥಾಪನೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತೆಂದು ತಿಳಿಸಿದ್ದಾರೆ ಸಚಿವ ಜೋಶಿ.

ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳನ್ನು ಮತ್ತಷ್ಟು ಹೆಚ್ಚಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಭಾರತದ ಬಲವರ್ಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ತರ ಹೆಜ್ಜೆ ಇರಿಸಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

28 ನವೋದಯ ವಿದ್ಯಾಲಯಗಳ ಸ್ಥಾಪನೆಗೆ 2024-25 ರಿಂದ 2028-29ರವರೆಗೆ ಒತ್ತು ₹2,359.82 ಕೋಟಿ ರು. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣ ಎಕ್ಸ್ ( ಟ್ವಿಟ್ಟರ್ ) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

" ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಿಂದ ದೇಶದಲ್ಲಿ ಸುಮಾರು 82 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ. 2025-26ರಿಂದ ಮುಂದಿನ ಎಂಟು ವರ್ಷಗಳಲ್ಲಿ ಈ ವಿದ್ಯಾಲಯಗಳನ್ನು ತೆರೆಯಲಾಗುವುದು " ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಕೇಂದ್ರೀಯ ವಿದ್ಯಾಲಯ ತೆರೆಯಲು 5,872 ಕೋಟಿ ಮತ್ತು ನವೋದಯ ಶಾಲೆ ತೆರೆಯಲು 2,359 ಕೋಟಿ ರೂಪಾಯಿ ಅವಶ್ಯಕತೆಯಿದೆ. ದೇಶದಲ್ಲಿ ಪ್ರಸ್ತುತ 1,256 ಕೇಂದ್ರೀಯ ವಿದ್ಯಾಲಯಗಳಿವೆ ಎಂದು ಸಚಿವರು ಹೇಳಿದ್ದಾರೆ.

Comments


Top Stories

bottom of page