ರಾಷ್ಟ್ರೀಯತೆ ಭಾವನೆ ಬೆಳೆಸಲು ಶಿಕ್ಷಕರು ಪ್ರಯತ್ನಿಸಬೇಕು : ಕಾಗೇರಿ
- Ananthamurthy m Hegde
- Jan 6
- 1 min read
ಯಲ್ಲಾಪುರ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯದ ಶಿಕ್ಷಣದ ಜತೆಗೆ ಶಿಸ್ತು, ಸಾಮಾಜಿಕ ಹೊಣೆಗಾರಿಕೆ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ಕಾರ್ಮಿಕ ಭವನದಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಆಯೋಜಿಸಿದ್ದ ಪ್ರೌಢಶಾಲಾ ಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆದು, ಜವಾಬ್ದಾರಿಯುತ ನಾಗರಿಕರ ನಿರ್ಮಾಣ ಶಿಕ್ಷಕರಿಂದ ಸಾಧ್ಯ. ವಿದ್ಯಾರ್ಥಿಗಳನ್ನು ಸಣ್ಣ ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆ ನೀಡುತ್ತ ದೊಡ್ಡ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಹೊಸ ಶಿಕ್ಷಣ ನೀತಿಯಡಿ ಕೌಶಲ್ಯಯುತ ಯುವ ಪೀಳಿಗೆ ಸಿದ್ಧವಾಗಬೇಕು ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲೇ ಉತ್ತಮ ಜಿಲ್ಲೆ ಎಂಬುದನ್ನು ಸಾಧಿಸಲು ಶಿಕ್ಷಕರ ಶ್ರಮ ಅಗತ್ಯ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾರ್ಜನೆ ಮಾಡುತ್ತಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾಧ್ಯಮಿಕ ನೌಕರರ ಸಂಘ ನೆರವಾಗಬೇಕು. ಅಗತ್ಯವಿದ್ದಲ್ಲಿ ಅವ್ವ ಟ್ರಸ್ಟ್ ನಿಂದಲೂ ನೆರವಾಗುತ್ತೇವೆ ಎಂದರು.
ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ದೊಡ್ಡ ಸಾಧನೆ ಮಾಡಬಹುದೆಂಬುದು ತಪ್ಪು ಕಲ್ಪನೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಹಲವರು ಸಾಧನೆ ಮಾಡಿದ ನಿದರ್ಶನಗಳಿವೆ ಎಂದ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು. ಶಿಕ್ಷಕರಿಗೆ ಪಾಠದ ಜೊತೆಗೆ ಇತರ ಕಾರ್ಯಗಳ ಹೊರೆ ಹೊರಿಸಿ, ಮಾನಸಿಕ ನೆಮ್ಮದಿ ಕೆಡಿಸುವುದನ್ನು ನಿಲ್ಲಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಹಣಕಾಸು ಇಲಾಖೆಯವರ ಹಸ್ತಕ್ಷೇಪ ನಿಲ್ಲಬೇಕು. ಶಿಕ್ಷಕರ ಪ್ರಮುಖ ಸಮಸ್ಯೆಗಳನ್ನು ನೀಗಿಸುವ ಬಗ್ಗೆ ಸಂಘ ಆದ್ಯತೆ ನೀಡಬೇಕು ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಉಪವಿಭಾಗಾಧಿಕಾರಿ ಕಾವ್ಯಾರಾಣಿ, ಡಿಡಿಪಿಐ ಪಾರಿ ಬಸವರಾಜ, ಬಿಇಒ ಎನ್.ಆರ್.ಹೆಗಡೆ, ತಹಸೀಲ್ದಾರ ಯಲ್ಲಪ್ಪ ಗೊನ್ನೆಣ್ಣವರ್, ಶಿಕ್ಷಕ ಸಂಘಟನೆಗಳ ಪ್ರಮುಖರಾದ ನಾರಾಯಣ ನಾಯಕ, ಎಂ.ಟಿ.ಗೌಡ, ಸೋಮು ಮೂಡಣ್ಣವರ್, ಎಲ್.ಎಂ.ಹೆಗಡೆ, ಅಜಯ ನಾಯಕ ಇತರರಿದ್ದರು. ಸಂಚಾಲಕ ಎಂ.ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಲ್ಸನ್ ಗೊನ್ಸಾಲ್ವಿಸ್, ಡಾ.ನವೀನಕುಮಾರ, ಶ್ರೀಧರ ಹೆಗಡೆ ನಿರ್ವಹಿಸಿದರು.















Comments