ರನ್‌ವೇನಿಂದ ಜಾರಿ ವಿಮಾನ ಸ್ಫೋಟ!
- Ananthamurthy m Hegde
- Dec 29, 2024
- 1 min read

ಕಝಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ಪತನ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ವಿಮಾನ ಅಪಘಾತ ಸಂಭವಿಸಿದೆ. ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವನ್ನೇ ಹೋಲುವಂತಹ ಮತ್ತೊಂದು ವಿಮಾನ ದುರಂತ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದು, ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 181 ಮಂದಿಯಲ್ಲಿ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಇಂತಹದೊಂದು ಭೀಕರ ವಿಮಾನ ಅಪಘಾತ ಸಂಭವಿದೆ. ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಆಚೆಗೆ ಹೊರಳಿ ಪತನಗೊಂಡಿದೆ. ತಕ್ಷಣವೇ ವಿಮಾನಕ್ಕೆ ಬೆಂಕಿ ತಗುಲಿ ಸ್ಥಳದಲ್ಲೇ 29 ಮಂದಿ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ. ಬಹುತೇಕರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಇಬ್ಬರನ್ನು ಹೊರತಡುಪಡಿಸಿ ವಿಮಾನದಲ್ಲಿದ್ದ ಉಳಿದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಜೆಜು ಏರ್ ಫ್ಲೈಟ್ 2216 ವಿಮಾನವು 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳೊಂದಿಗೆ ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ದಕ್ಷಿಣ ಕೊರಿಯಾದ ಮುವಾನ್‌ಗೆ ಹಿಂತಿರುಗುತ್ತಿತ್ತು. ಈ ವೇಳೆ ಲ್ಯಾಂಡಿಂಗ್ ಆಗುತ್ತಿದ್ದ ಸಮಯದಲ್ಲಿ ವಿಮಾನವು ರನ್‌ವೇಯಿಂದ ಹೊರಕ್ಕೆ ಹೊರಳಿ ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಬಂದು ಗುದ್ದಿ ಸ್ಫೋಟಗೊಂಡಿದೆ. ಪರಿಣಾಮ ವಿಮಾನವು ಅಗ್ನಿಗಾಹುತಿಯಾಗಿದೆ ಎಂದು ವರದಿಯಾಗಿದೆ.
ವಿಮಾನ ಅಪಘಾತದ ಕೊನೇಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಘಾತ ನಡೆದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಸರಿಯಾಗಿ ಲ್ಯಾಂಡಿಂಗ್ ಮಾಡಲು ಭಾರೀ ಪ್ರಯತ್ನ ಮಾಡಿದರೂ ವಿಫಲವಾಗಿದೆ. ವಿಮಾನ ಸ್ಫೋಟಕ್ಕೂ ಮುನ್ನ ಜೋರಾಗಿ ಶಬ್ದವೂ ಕೇಳಿದೆ ಎಂದು ತಿಳಿದು ಬಂದಿದೆ. ವಿಮಾನದ ಲ್ಯಾಂಡಿಂಗ್ ಗೇರ್ ಸರಿಯಾಗಿ ಹಿಡಿತಕ್ಕೆ ಸಿಗದ ಕಾರಣ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಹೀಗಾಗಿ ವಿಮಾನವು ರನ್‌ವೇಯಿಂದ ಹೊರಗೆ ಜಾರಿ ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಅಪ್ಪಳಿಸಿದೆ, ಸ್ಫೋಟದ ತೀವ್ರತೆಗೆ ವಿಮಾನದ ಮುಂಭಾಗ ಮತ್ತು ಹಿಂಭಾಗ ಎರಡು ತುಂಡುಗಳಾಗಿ ಮುರಿದು ಬೆಂಕಿಯ ಜ್ವಾಲೆಯಾಗಿ ಸಿಡಿದಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ವಿಮಾನ ದುರಂತಕ್ಕೆ ನಿಖರವಾದ ಕಾರಣ ಏನು ಅನ್ನೋದನ್ನು ನಿರ್ಧರಿಸಲು ಅವರು ಆನ್-ಸೈಟ್ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಜೆಜು ಏರ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ವಿಷಾದ ವ್ಯಕ್ತಪಡಿಸಿದ್ದು, ತನ್ನ ಲೇಔಟ್ ಅನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿದೆ. ಅಲ್ಲದೇ, ‘ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯಿಂದ ಹಾನಿಗೊಳಗಾದ ಎಲ್ಲರಿಗೂ ನಾವು ಕ್ಷಮೆಯಾಚಿಸುತ್ತೇವೆ. ಪರಿಸ್ಥಿತಿಯನ್ನು ಪರಿಹರಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಈ ದುರಂತಕ್ಕೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ’ ಎಂದು ವೆಬ್‌ಸೈಟ್‌ನಲ್ಲಿನ ಹೇಳಿಕೆ ನೀಡಿದೆ.
Comments