top of page

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್

  • Writer: Ananthamurthy m Hegde
    Ananthamurthy m Hegde
  • Dec 11, 2024
  • 1 min read


ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರನ್ನು ಮಾಸ್ಕೋದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ರಷ್ಯಾದೊಂದಿಗೆ ಭಾರತದ ಬಾಂಧವ್ಯ ಅತ್ಯಂತ ಎತ್ತರದ ಪರ್ವತಕ್ಕಿಂತಲೂ ಎತ್ತರವಾಗಿದೆ ಮತ್ತು ಸಾಗರದ ಅತ್ಯಂತ ಆಳವಾಗಿರುವ ಪ್ರದೇಶಕ್ಕಿಂತಲೂ ಆಳವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಸಭೆಯಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದ್ದು, ಸಹಭಾಗಿತ್ವದ ಪ್ರಯತ್ನಗಳು ಗಮನಾರ್ಹ ಫಲಿತಾಂಶಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಉಭಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಯಾವಾಗಲೂ ರಷ್ಯಾದ ಪರವಾಗಿ ನಿಂತಿದೆ ಮತ್ತು ಭವಿಷ್ಯದಲ್ಲಿಯೂ ಈ ನೀತಿಯನ್ನು ಮುಂದುವರೆಸುತ್ತದೆ ಎಂದು ಸಿಂಗ್ ಪುಟಿನ್ ಅವರಿಗೆ ತಿಳಿಸಿದ್ದಾರೆ.

ವಾಡ್ಲಿಮಿರ್ ಪುಟಿನ್ ಭೇಟಿಗೂ ಮುನ್ನಾ ರಾಜನಾಥ್ ಸಿಂಗ್ ಅವರು ಮಿಲಿಟರಿ ಸಹಕಾರಕ್ಕೆ ಸಂಬಂಧಿಸಿದ ಭಾರತ- ರಷ್ಯಾ ಅಂತರ- ಸರ್ಕಾರಿ ಆಯೋಗದ 21ನೇ ಅಧಿವೇಶನದಲ್ಲಿ ರಷ್ಯಾದ ರಕ್ಷಣಾ ಸಚಿವ ಆಂಡ್ರೆ ಬೆಲೊಸೊವ್ ಅವರೊಂದಿಗೆ ಪಾಲ್ಗೊಂಡರು.

ಬೆಲೊಸೊವ್ ಅವರೊಂದಿಗಿನ ಸಭೆಯಲ್ಲಿ ಭಾರತಕ್ಕೆ 'ಎಸ್ 400 ಟ್ರಯಂಫ್' ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಇನ್ನುಳಿದ ಎರಡು ಘಟಕಗಳ ಪೂರೈಕೆಯನ್ನು ತ್ವರಿತಗೊಳಿಸುವಂತೆ ರಾಜನಾಥ್ ಸಿಂಗ್ ಒತ್ತಾಯಿಸಿದ್ದಾರೆ ಎಂದು ರಕ್ಷಣಾ ಪ್ರಕಟಣೆ ತಿಳಿಸಿದೆ.

ಈ ಸಭೆಗೂ ಮುನ್ನ ರಾಜನಾಥ್ ಅವರು ಮಾಸ್ಕೋದಲ್ಲಿ ಎರಡನೇ ಮಹಾಯುದ್ಧದಲ್ಲಿ ಮಡಿದ ಸೋವಿಯತ್ ಸೈನಿಕರಿಗೆ ಗೌರವ ಸಲ್ಲಿಸಿದರು.

Comments


Top Stories

bottom of page