top of page

ಶೋಕಾಚರಣೆ ನಡುವೆ ವಿಯೆಟ್ನಾಮ್ ಗೆ ಹಾರಿದ ರಾಹುಲ್ ಗಾಂಧಿ : ಬಿಜೆಪಿಗರಿಂದ ಟೀಕೆ

  • Writer: Ananthamurthy m Hegde
    Ananthamurthy m Hegde
  • Jan 1
  • 1 min read

ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ನಿಧನದ ಹಿನ್ನೆಲೆಯಲ್ಲಿ, ದೇಶಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದು, ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಹೊಸ ವಾಕ್ಸಮರಕ್ಕೆ ಕಾರಣವಾಗಿದೆ.

ಹೌದು, ರಾಹುಲ್‌ ಗಾಂಧಿ ಅವರ ವಿಯೆಟ್ನಾಂ ಪ್ರವಾಸ ಇದೀಗ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ದೇಶ ಶೋಕಾಚರಣೆ ನಡೆಸುತ್ತಿರುವಾಗ ಲೋಕಸಭೆ ವಿಪಕ್ಷ ನಾಯಕ ವಿದೇಶ ಪ್ರವಸ ಕೈಗೊಳ್ಳುವುದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಇಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯಾ, "ದೇಶ ಡಾ. ಸಿಂಗ್‌ ಅವರ ನಿಧನದ ಶೋಕಾಚರಣೆ ನಡೆಸುತ್ತಿದ್ದರೆ, ಹೊಸ ವರ್ಷಾಚರಣೆ ಪಾರ್ಟಿ ಮಾಡಲು ರಾಹುಲ್‌ ಗಾಂಧಿ ವಿಯೆಟ್ನಾಂಗೆ ಹಾರಿದ್ದಾರೆ.." ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಡಾ. ಸಿಂಗ್‌ ಅವರ ಅಂತ್ಯಕ್ರಿಯೆ ವಿಧಾನ ಕುರಿತು ಕೀಳು ಮಟ್ಟದ ರಾಜಕೀಯ ಮಾಡಿದ ರಾಹುಲ್‌ ಗಾಂಧಿ, ಈಗ ಅದೆಲ್ಲವನ್ನೂ ಮರೆತು ಶೋಕಾಚರಣೆ ನಡುವೆಯೂ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಹೊಸ ವರ್ಷದ ಪಾರ್ಟಿ ಮಾಡಲೆಂದೇ ರಾಹುಲ್‌ ಗಾಂಧಿ ವಿಯೆಟ್ನಾಂಗೆ ಹಾರಿದ್ದಾರೆ.." ಎಂದು ಅಮಿತ್‌ ಮಾಳವೀಯಾ ಆರೋಪಿಸಿದ್ದಾರೆ.

"ಡಾ. ಸಿಂಗ್‌ ನಿಧನ ಕಾಂಗ್ರೆಸ್‌ ನಾಯಕನ ಪಾಲಿಗೆ ಕೇವಲ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಾಧನವಾಗಿದೆ. ಮಾಜಿ ಪ್ರಧಾನಿ ಅವರನ್ನು ತಮ್ಮ ಗುರು ಎಂದು ಕರೆದಿದ್ದ ರಾಹುಲ್‌ ಗಾಂಧಿ, ಈಗ ಅವರ ನಿಧನದ ಶೋಕಾಚರಣೆ ನಡುವೆಯೇ ವಿದೇಶಕ್ಕೆ ಹಾರಿರುವುದು ಡಾ. ಸಿಂಗ್‌ ಮೇಲೆ ರಾಹುಲ್‌ ಅವರಿಗೆ ಅದೆಷ್ಟು ಗೌರವವಿದೆ ಎಂಬುದನ್ನು ಸಾಬೀತುಪಡಿಸುತ್ತದೆ.." ಎಂದು ಅಮಿತ್‌ ಮಾಳವೀಯಾ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ತಿರುಗೇಟು:

ಇನ್ನು ರಾಹುಲ್‌ ಗಾಂಧಿ ವಿಯೆಟ್ನಾಂ ಪ್ರವಾಸದ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಪ್ರತಿಪಕ್ಷ ಕಾಂಗ್ರೆಸ್‌, ರಾಹುಲ್‌ ಅವರ ವೈಯಕ್ತಿಕ ವಿದೇಶ ಪ್ರವಾಸಕ್ಕೂ ಡಾ. ಸಿಂಗ್‌ ಶೋಕಾಚರಣೆಗೂ ಏನು ಸಂಬಂಧ ಎಂದು ಪ್ರಶ್ನಿಸಿದೆ. "ಶೋಕಾಚರಣೆ ಕಾರಣಕ್ಕೆ ದೇಶದಲ್ಲಿ ಯಾರೂ ವೈಯಕ್ತಿಕವಾಗಿ ವಿದೇಶ ಪ್ರವಾಸ ಮಾಡುತ್ತಿಲ್ಲವೇ.." ಎಂದು ಕಾಂಗ್ರೆಸ್‌ ಖಾರವಾಗಿ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ವಕ್ತಾರ ಮಾನ್ಸಿಕಂ ಟ್ಯಾಗೋರ್‌, "ಸಂಘಿಗಳ 'ಟೇಕ್‌ ಡೈವರ್ಷನ್'‌ ರಾಜಕೀಯಕ್ಕೆ ಕೊನೆ ಎಂದು? ಯಮುನಾ ನದಿ ತೀರದಲ್ಲಿ ಡಾ. ಸಿಂಗ್‌ ಅಂತ್ಯಕ್ರಿಯೆಗೆ ಅವಕಾಶ ನೀಡದ ಪ್ರಧಾನಿ ಮೋದಿ ಅವರ ನಡೆ ಮತ್ತು ಅಂತ್ಯಕ್ರಿಯೆ ಸಮಯದಲ್ಲಿ ಡಾ. ಸಿಂಗ್‌ ಅವರ ಕುಟುಂಬವನ್ನು ಕಡೆಗಣಿಸಿದ ರೀತಿಯನ್ನು ದೇಶದ ಜನ ಮರೆಯುವುದಿಲ್ಲ. ಒಂದು ವೇಳೆ ರಾಹುಲ್‌ ಗಾಂಧಿ ವೈಯಕ್ತಿಕವಾಗಿ ವಿದೇಶ ಪ್ರವಾಸ ಕೈಗೊಂಡರೆ ಅದರಿಂದ ಬಿಜೆಪಿಗೇನೂ ತೊಂದರೆ..?" ಎಂದು ಖಡಕ್‌ ಆಗಿ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಶೋಕಾಚರಣೆ ನಡುವೆ ವಿದೇಶ ಪ್ರವಾಸ ಕೈಗೊಂಡ ರಾಹುಲ್‌ ಗಾಂಧಿ ಮತ್ತು ಈ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನಡೆಯುತ್ತಿರುವ ವಾಕ್ಸಮರ ದೇಶದ ಜನರ ಗಮನ ಸೆಳೆದಿದೆ.

Comments


Top Stories

bottom of page