top of page

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಪಂಪಾ ಸ್ಪಾಟ್ ಬುಕಿಂಗ್ ಸಂಖ್ಯೆ ಹೆಚ್ಚಳ

  • Writer: Ananthamurthy m Hegde
    Ananthamurthy m Hegde
  • Dec 30, 2024
  • 1 min read
ree

ಶಬರಿಮಲೆ: ಮಕರ ಜ್ಯೋತಿ ಯಾತ್ರೆಗೆ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗಾಗಿ ಪಂಪಾದಲ್ಲಿ ಸ್ಪಾಟ್‌ ಬುಕ್ಕಿಂಗ್‌ ಕೌಂಟರ್‌ಗಳ ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಪಂಪಾದಲ್ಲಿ ಏಳು ಕೌಂಟರ್‌ಗಳು ಕಾರ್ಯಾಚರಿಸುತ್ತಿದ್ದು, 60 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಮೂರು ಕೌಂಟರ್‌ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.

ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ಅಧ್ಯಕ್ಷತೆಯಲ್ಲಿ ಪತ್ತನಂತಿಟ್ಟ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪಂದಳಂ ಅರಮನೆಯಿಂದ ತಿರುವಾಭರಣ ಮೆರವಣಿಗೆ ಸಾಗುವ ರಸ್ತೆಗಳ ದುರಸ್ತಿ ಕಾರ್ಯಗಳನ್ನು ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ನೋಡಿಕೊಳ್ಳಬೇಕು. ಅಪಾಯಕಾರಿ ಕೊಂಬೆಗಳನ್ನು ಕತ್ತರಿಸಬೇಕು. ಬೀದಿ ದೀಪಗಳ ಕಾರ್ಯಾಚರಣೆಯನ್ನು ಖಾತ್ರಪಡಿಸಬೇಕು. ಯಾತ್ರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಯಾತ್ರಾರ್ಥಿಗಳು ಆಗಮಿಸುವ ಮಾರ್ಗದ ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳು ದಿನದ 24 ಗಂಟೆಯೂ ತೆರೆದಿರಬೇಕು. ವನ್ಯ ಜೀವಿಗಳ ಅಪಾಯದ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಬೇಕು. ಎಲಿಫೆಂಟ್‌ ಸ್ಕ್ವಾಡ್ ನೇಮಿಸಬೇಕು. ಶಬರಿಮಲೆಯಿಂದ ಭಕ್ತರು ಮರಳುವ ಮಾರ್ಗದಲ್ಲೂ ಎಲ್ಲ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಜ.12ರಿಂದ 14ರ ತನಕ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಲ್ಲಿ ಪೊಲೀಸರು ವಿಶೇಷ ಯೋಜನೆ ಸಿದ್ಧಪಡಿಸಿದ್ದಾರೆ. ಎಲ್ಲ ಇಲಾಖೆಗಳು ಪರಸ್ಪರ ಸಹಕಾರ ಖಾತ್ರಿಪಡಿಸುವಂತೆ ಹಾಗೂ ಮಕರ ಜ್ಯೋತಿ ವ್ಯೂ ಪಾಯಿಂಟ್‌ಗಳಲ್ಲಿ ಸುರಕ್ಷತೆ ಖಚಿತಪಡಿಸುವಂತೆಯೂ ಸಭೆಯಲ್ಲಿ ಸೂಚಿಸಲಾಗಿದೆ.

ಶಬರಿಮಲೆ ಮಂಡಲಪೂಜೆ, ಮಕರಜ್ಯೋತಿ ಮಹೋತ್ಸವಕ್ಕೆ ಸಂಬಂಧಿಸಿದಂತೆ ಮುಕ್ಕುಯಿ ಮತ್ತು ಅಝುತಕ್ಕಡವ್‌ ಕಾನನ ಮಾರ್ಗದಲ್ಲಿ ಪ್ರಯಾಣದ ಅವಧಿಯನ್ನು ವಿಸ್ತರಿಸಿ ಇಡುಕ್ಕಿ ಜಿಲ್ಲಾಧಿಕಾರಿ ವಿ.ವಿಘ್ನೇಶ್ವರಿ ಆದೇಶ ಹೊರಡಿಸಿದ್ದಾರೆ.

ಶಬರಿಮಲೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ನೀಡಲಾಗಿದೆ. ಪರಿಷ್ಕೃತ ವೇಳಾ ಪಟ್ಟಿಯಂತೆ ಅಝುತಕ್ಕಡವ್‌ ಮೂಲಕ ಬೆಳಗ್ಗೆ 7ರಿಂದ ಸಂಜೆ 3.30ರ ವರೆಗೆ ಮತ್ತು ಮುಕ್ಕುಝಿ ಮೂಲಕ ಬೆಳಗ್ಗೆ 7ರಿಂದ ಸಂಜೆ 4ರ ವರೆಗೆ ಪ್ರವೇಶಿಸಬಹುದು. ಆದರೆ ಸತ್ರಂ ಪ್ರವೇಶ ಹಿಂದಿನಂತೆ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮುಂದುವರಿಯಲಿದೆ.

Comments


Top Stories

bottom of page